ತಿರುಪ್ಪಾಣಾಳ್ವಾರ್

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

tiruppanazhwar1

ತಿರುನಕ್ಷತ್ರಮ್: ಕಾರ್ತಿಗೈ, ರೋಹಿಣಿ
ಅವತಾರ ಸ್ಥಳಂ: ಉರೈಯೂರ್
ಆಚಾರ್ಯನ್: ವಿಶ್ವಕ್ಸೇನರ್
ಕೃತಿಗಳು: ಅಮಲನಾದಿಪಿರಾನ್
ಪರಮಪದಕ್ಕೆ ಸೇರಿದ ಸ್ಥಳ: ಶ್ರೀರಂಗಮ್

ಪೂರ್ವಾಚಾರ್ಯ ಚರಿತ್ರೆಯಲ್ಲಿ ಆಳವಂದಾರರಿಗೆ ಮುನಿ ವಾಹನರ್ ಎಂದೂ ಹೆಸರಾದ ತಿರುಪ್ಪಾಣಾಳ್ವಾರರ ಕುರಿತು ವಿಶಿಷ್ಟವಾದ ಸಂಬಂಧವಿತ್ತೆಂದು ವಿವರಿಸಲಾಗಿದೆ.

ಪೆರಿಯವಾಚಾನ್ ಪಿಳ್ಳೈ, ಅಳಗಿಯ ಮಣವಾಳ ಪೆರುಮಾಳ್ ನಾಯನಾರ್ ಮತ್ತು ವೇದಾಂತಾಚಾರ್ಯರ್ ಇವರು ಆಳ್ವಾರರ ಅಮಲನಾದಿಪಿರಾನ್ ಪ್ರಬಂಧಕ್ಕೆ ಸುಂದರವಾದ ವ್ಯಾಖ್ಯಾನಗಳನ್ನು ಬರೆದಿದ್ದಾರೆ.

ಅಳಗಿಯ ಮಣವಾಳ ಪೆರುಮಾಳ್ ನಾಯನಾರ್ ಅವರು ತಮ್ಮ ವ್ಯಾಖ್ಯಾನ ಅವತಾರಿಕೆಯಲ್ಲಿ ತಿರುಪ್ಪಾಣಾಳ್ವಾರರ ಹಿರಿಮೆಯನ್ನು ಅದ್ಭುತವಾಗಿ ವೈಭವೀಕರಿಸಿದ್ದಾರೆ. ಅದನ್ನು ನಾವು ಈಗ ನೋಡೋಣ.

ಮುದಲಾಳ್ವಾರರು ಶ್ರೀಮನ್ ನಾರಾಯಣನ ಪರತ್ವದ ಮೇಲೆ ಗಮನವನ್ನು ಕೇಂದ್ರೀಕರಿಸಿದ್ದಾರೆ ಮತ್ತು ಆತನ ಅರ್ಚಾವತಾರದ ಬಗ್ಗೆಯೂ ಸಂಕ್ಷಿಪ್ತವಾಗಿ ಹೇಳಿದ್ದಾರೆ. ಕುಲಶೇಖರಾಳ್ವಾರರು ಶ್ರೀ ವಾಲ್ಮೀಕಿ ಭಗವಾನರಂತೆ ಶ್ರೀರಾಮ ಅನುಭವದ ಮೇಲೆ ಗಮನವಿಟ್ಟಿದ್ದಾರೆ ಮತ್ತು ಅರ್ಚಾವತಾರದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ವೇದವ್ಯಾಸ ಭಗವಾನರಂತೆ, ನಮ್ಮಾಳ್ವಾರ್, ಪೆರಿಯಾಳ್ವಾರ್ ಮತ್ತು ಆಂಡಾಳ್ ಕೃಷ್ಣ ಅನುಭವದ ಮೇಲೆ ಗಮನವಿಟ್ಟಿದ್ದಾರೆ, ಮತ್ತು ಅರ್ಚಾವತಾರವನ್ನೂ ಸಹ ಆನಂದಿಸಿದ್ದಾರೆ. ತಿರುಮಳಿಶೈ ಆಳ್ವಾರ್ ದೇವತಾಂತರ ಪರತ್ವ ನಿರಸನದ (ಇತರ ದೇವತೆಗಳು ಸರ್ವೋಚ್ಛರು ಎಂಬ ಸಂಬಂಧವನ್ನು ತೊಡೆದು ಹಾಕುವುದು) ಮೇಲೆ ಗಮನವಿಟ್ಟಿದ್ದಾರೆ ಮತ್ತು ಅರ್ಚಾವತಾರದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ತಿರುಮಂಗೈ ಆಳ್ವಾರ್ ಎಲ್ಲ ಅರ್ಚಾವತಾರ ಎಂಪೆರುಮಾನರ ಮೇಲೆಯೂ ಗಮನವಿಟ್ಟಿದ್ದಾರೆ ಮತ್ತು ಪ್ರತಿಯೊಬ್ಬರನ್ನೂ ಸಂದರ್ಶಿಸಿ ವೈಭವೀಕರಿಸಿದ್ದಾರೆ. ಆದರೆ ಅವರು ಅನೇಕ ಸ್ಥಳಗಳಲ್ಲಿ ವಿಭವಾವತಾರ (ಶ್ರೀ ರಾಮ, ಕೃಷ್ಣ, ಇತ್ಯಾದಿ) ಮಾತು ಅರ್ಚಾವತಾರಗಳನ್ನು ನಿಯತವಾಗಿ ವಿನಿಮಯ ಮಾಡಿದ್ದಾರೆ. ತೊಂಡರಡಿಪ್ಪೊಡಿ ಆಳ್ವಾರರು ಪೆರಿಯ ಪೆರುಮಾಳ್ (ಶ್ರೀ ರಂಗನಾಥ) ಅನುಭವಿಸುವುದರಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ ಮತ್ತು ಅದೇ ಸಮಯದಲ್ಲಿ, ತಮ್ಮ ಪಾಶುರಗಳಲ್ಲಿ, ಸ್ವತಃ: ತಮ್ಮ ಮಿತಿಗಳನ್ನು ತೋರಿಸಿದ್ದಾರೆ, ಇತರರಿಗೆ ಉಪದೇಶ ಮಾಡುವುದು ಇತ್ಯಾದಿ.

ತಿರುಪ್ಪಾಣಾಳ್ವಾರ್, ಇತರ ಆಳ್ವಾರರಿಗಿಂತ ಪೂರ್ತಿಯಾಗಿ ಭಿನ್ನವಾದ ಸ್ತರದಲ್ಲಿದ್ದುದರಿಂದ, ಸಂಪೂರ್ಣವಾಗಿ ಅರ್ಚಾವತಾರ ಎಂಪೆರುಮಾನನನ್ನು, ಅದು ಕೂಡ ಪೆರಿಯ ಪೆರುಮಾಳರನ್ನು, ಮಾತ್ರ ಆನಂದಿಸುವುದರಲ್ಲಿ ಗಮನವನ್ನು ಕೇಂದ್ರೀಕರಿಸಿದ್ದರು. ಕಟವಲ್ಲಿ (ಉಪನಿಷದ್) ಅರ್ಚಾವತಾರವು ಎಂಪೆರುಮಾನನ ಸಂಪೂರ್ಣ ಅಭಿವ್ಯಕ್ತಿಯೆಂದು ಸಾರುವುದರಿಂದ, ಆಳ್ವಾರರು ಸುಮ್ಮನೆ ಪೆರಿಯ ಪೆರುಮಾಳರನ್ನುವೈಭವೀಕರಿಸುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಕೃಷ್ಣನು ಅರ್ಜುನನಿಗೆ ದಿವ್ಯ ಚಕ್ಷುಷಗಳನ್ನು ಕೊಟ್ಟು ತನ್ನ ವಿಶ್ವರೂಪವನ್ನು ಅವನಿಗೆ ತೋರಿಸಿದ ಹಾಗೆ ಮತ್ತು ತನ್ನ ಸೌಂದರ್ಯ, ಉದಾರತೆ, ಇತ್ಯಾದಿಗಳಿಂದ ಅಕ್ರೂರ, ಮಾಲಾಕಾರ, ಇತರರನ್ನು ಆಕರ್ಷಿಸಿದ ಹಾಗೆ, ಪೆರಿಯ ಪೆರುಮಾಳ್ ಅರ್ಚಾ (ಎಲ್ಲಿ ಜನಸಾಮಾನ್ಯರೊಡನೆ ಸಂಭಾಷಣೆ ಮಾಡುವುದಿಲ್ಲವೋ) ಕೂಡ ತನ್ನ ಸೌಂದರ್ಯವನ್ನು ಆಳ್ವಾರರಿಗೆ ತೋರಿಸಿದನು ಮತ್ತು ಆಳ್ವಾರರು ತಕ್ಷಣವೇ ಪೆರಿಯ ಪೆರುಮಾಳರ ಆ ದಿವ್ಯ ರೂಪವನ್ನು ಪೂರ್ಣವಾಗಿ ಆನಂದಿಸಿದರು.

ಆಳ್ವಾರರು ಪಂಚಮ ವರ್ಣದಲ್ಲಿ ಜನಿಸಿದವರಾದ್ದರಿಂದ ನೈಚ್ಯ(ನಮ್ರತೆ) ಅವರಿಗೆ ಜನ್ಮಸಿದ್ಧವಾಗಿತ್ತು. ಆದ್ದರಿಂದ ಅವರು ಇತರ ಆಳ್ವಾರರಂತೆ ನೈಚ್ಯವನ್ನು ಹೊಂದಬೇಕಾಗಲಿಲ್ಲ, ಸ್ವಾಭಾವಿಕವಾಗಿಯೇ ಅದು ಅವರಲ್ಲಿದ್ದುದರಿಂದ. ಅವರು ತಾವಾಗಿಯೇ ತಮ್ಮನ್ನು ನಾಲ್ಕು ವರ್ಣಗಳಿಗೆ ಹೊರತಾದವ (ಪಂಚಮ)ರೆಂದು ಭಾವಿಸಿದ್ದರು ಮತ್ತು ಪೆರಿಯ ಪೆರುಮಾಳ್ ಕೂಡ ಅವರನ್ನು ನಾಲ್ಕು ವರ್ಣಗಳಿಗೆ ಹೊರತಾದವರೆಂದು (ನಿತ್ಯಸೂರಿಯೆಂದು) ಪರಿಗಣಿಸಿದರು.

ಹೇಗೆ ತಿರುವಡಿ(ಹನುಮಾನ್) ತಾನು ಸದಾಕಾಲವೂ ರಾಮ ಅನುಭವದಲ್ಲಿ ತಲ್ಲೀನರಾಗಿರಬೇಕೆಂದು ಶ್ರೀ ರಾಮನಿಗೆ ಘೋಷಿಸಿದರೋ ಮತ್ತು ಪರಮಪದಕ್ಕೆ ಕೂಡ ಹೋಗಲು ಬಯಸಲಿಲ್ಲವೋ ಹಾಗೆ, ಆಳ್ವಾರರೂ ಕೂಡ ಪೆರಿಯ ಪೆರುಮಾಳರ ಅನುಭವದಲ್ಲಿ ತಲ್ಲೀನರಾಗಿದ್ದು ಬೇರೇನೂ ಬೇಡವೆಂದು ಬಯಸಿದರು.

ಅವರ ಈ ಗರಿಮೆಯಿಂದಾಗಿ, ಹೇಗೆ ಶ್ರೀ ರಾಮರು ಸುಗ್ರೀವ ಮಹಾರಾಜನನ್ನು ಶ್ರೀ ವಿಭೀಷಣಾಳ್ವಾನನನ್ನು ಬರಮಾಡಲು ಕಳುಹಿಸಿದರೋ ಹಾಗೆ, ಪೆರಿಯ ಪೆರುಮಾಳ್ ಆಳ್ವಾರರನ್ನು ಪೆರಿಯ ಕೋಯಿಲ್ ಗೆ ಕರೆತರಲು ಶ್ರೀ ಲೋಕಸಾರಂಗ ಮಹಾಮುನಿಗಳನ್ನು ಕಳುಹಿಸುತ್ತಾರೆ. ಶ್ರೀ ಲೋಕಸಾರಂಗ ಮಹಾಮುನಿಗಳು ಆಳ್ವಾರರನ್ನು ಆಹ್ವಾನಿಸಿದಾಗ, ಆಳ್ವಾರರು ತಮ್ಮ ನಮ್ರಭಾವದಿಂದಾಗಿ ಕ್ಷೇತ್ರವನ್ನು ಪ್ರವೇಶಿಸಲು ನಿರಾಕರಿಸುತ್ತಾರೆ. ಆಗ, ಮಹಾಮುನಿಗಳು ಅವರನ್ನು ಒತ್ತಾಯಪಡಿಸುತ್ತಾರೆ ಮತ್ತು ತಮ್ಮ ಭುಜಗಳ ಮೇಲೆ ಅವರನ್ನು ಹೊತ್ತು ಪೆರಿಯ ಪೆರುಮಾಳರ ಹತ್ತಿರ ಕರೆತರುತ್ತಾರೆ. ಆಳ್ವಾರರು ಹೋಗುವ ಹಾದಿಯಲ್ಲಿ ತಮ್ಮ ದಿವ್ಯ ಪ್ರಬಂಧವಾದ ಅಮಲನಾದಿಪಿರಾನ್ ನ 9 ಪಾಶುರಗಳನ್ನು ಹಾಡುತ್ತಾರೆ ಮತ್ತು 10ನೆಯ ಪಾಶುರವನ್ನು ಶ್ರೀರಂಗದ ಪ್ರಧಾನ ಸನ್ನಿಧಿಯಲ್ಲಿ ಮುಗಿಸುತ್ತಾರೆ ಮತ್ತು ತಕ್ಷಣವೇ ಪರಮಪದನಾಥನೊಂದಿಗೆ ಇರಲು ಪರಮಪದದ ದಿವ್ಯ ನೆಲೆಗೆ ತಲುಪುತ್ತಾರೆ ಮತ್ತು ಎಲ್ಲ ನಿತ್ಯರು/ಮುಕ್ತರು ನಿರಂತರವಾಗಿ ಅವರನ್ನು ಶ್ಲಾಘಿಸುತ್ತಾರೆ.

ಮಾಮುನಿಗಳು ಆಳ್ವಾರರನ್ನು ವೈಭವೀಕರಿಸಿರುವುದನ್ನು ನಾವು ಇಲ್ಲಿ ಈಗಾಗಲೇ ನೋಡಿದ್ದೇವೆ:
http://ponnadi.blogspot.in/2012/10/archavathara-anubhavam-thiruppanazhwar.html.

ಇದನ್ನು ಗಮನದಲ್ಲಿಟ್ಟು, ನಾವು ಈಗ ಅವರ ಚರಿತ್ರೆಯನ್ನು ನೋಡೋಣ.
ತಿರುಪ್ಪಾಣಾಳ್ವಾರರ ಚರಿತ್ರೆಯು ಉರೈಯೂರ್ ಕಮಲವಲ್ಲಿ ನಾಚ್ಚಿಯಾರ್ ಚರಿತ್ರೆಯೊಂದಿಗೆ ಆರಂಭವಾಗುತ್ತದೆ (ಅವರಿಬ್ಬರೂ ಈ ದಿವ್ಯದೇಶದಲ್ಲಿ ಜನಿಸಿದವರಾದ್ದರಿಂದ).
ಯಾರ್ಯಾರು ಕಾವೇರಿನಡಿಯ ಗಾಳಿಯನ್ನು ಉಸಿರಾಡುತ್ತಾರೋ ಅವರಿಗೆ ಮೋಕ್ಷ ದೊರಕುತ್ತದೆಂದು ಹೇಳಲಾಗುತ್ತದೆ – ಹೀಗಿರುವಾಗ ಆ ನದಿಯ ದಡಗಳಲ್ಲಿ ವಾಸಿಸುವವರಿಗೆ ಏನೆಂದು ಹೇಳಬೇಕು. ನಿಚುಳಾಪುರಿ (ಉರೈಯೂರ್) ಹೀಗೆ ಕಾವೇರಿನದಿಯ ದಡದಲ್ಲಿರುವ, ಅನೇಕ ದೇವಸ್ಥಾನಗಳು, ಅರಮನೆಗಳು, ಇತ್ಯಾದಿಗಳಿರುವ ಒಂದು ರಾಜ್ಯ. ಸೂರ್ಯವಂಶದಿಂದ ಬಂದ ಚೋಳಭೂಪತಿ ಎಂಬ ರಾಜನು ಅದನ್ನು ಬಹು ಧಾರ್ಮಿಕವಾಗಿ ಆಳುತ್ತಿದ್ದನು. ಶ್ರೀ ಮಹಾಲಕ್ಷ್ಮಿಯು ಸಮುದ್ರ ರಾಜನಿಂದ (ಕ್ಷೀರಾಬ್ಧಿಯ ರಾಜ) ಉದಯಿಸಿದ ಹಾಗೆ, ನೀಳಾದೇವಿಯು (ಪರಮಪದನಾಥನ ಭಾರ್ಯೆ) ಉರೈಯೂರ್ ನಾಚ್ಚಿಯಾರ್ ಆಗಿ ನಂಪೆರುಮಾಳ್ (ಶ್ರೀ ರಂಗನಾಥನ್ ) ಜೊತೆ ಬಹು ನಿಕಟ ಬಾಂಧವ್ಯವನ್ನು ಹೊಂದಿದ್ದ ಧರ್ಮವರ್ಮನ ಮಗಳಾಗಿ ಉದಯಿಸುತ್ತಾಳೆ. ಅವಳು ಸದಾಕಾಲವೂ ನಂಪೆರುಮಾಳ್ ಬಗ್ಗೆಯೇ ಚಿಂತಿಸುತ್ತ ಬೆಳೆಯುತ್ತಾಳೆ ಮತ್ತು ಪ್ರಾಪ್ತವಯಸ್ಕಳಾದಾಗ ರಾಜ್ಯದಲ್ಲಿ ಒಂದು ಉದ್ಯಾನವನಕ್ಕೆ ಹೋಗುತ್ತಾಳೆ. ಅದೇ ಸಮಯದಲ್ಲಿ ನಂಪೆರುಮಾಳ್ ಅದೇ ಸ್ಥಳಕ್ಕೆ ಬೇಟೆಗಾಗಿ ಬರುತ್ತಾನೆ. ಅವನನ್ನು ನೋಡಿ, ಉರೈಯೂರ್ ನಾಚ್ಚಿಯಾರ್ ಬಹು ಆಕರ್ಷಿತಳಾಗುತ್ತಾಳೆ ಮತ್ತು ತನ್ನ ತಂದೆಗೆ ತಾನು ನಂಪೆರುಮಾಳ್ ನನ್ನು ಮಾತ್ರ ವಿವಾಹವಾಗುತ್ತೇನೆಂದು ತಿಳಿಸುತ್ತಾಳೆ. ಧರ್ಮವರ್ಮನು ಇದನ್ನು ಕೇಳಿ ಬಹು ಸಂತೋಷಗೊಂಡು, ನಂಪೆರುಮಾಳ್ ಬಳಿಗೆ ಹೋಗುತ್ತಾನೆ ಮತ್ತು ಅದನ್ನು ತಿಳಿಸುತ್ತಾನೆ. ಇದನ್ನು ಕೇಳಿ ಬಹು ಸಂತಸಗೊಂಡ ನಂಪೆರುಮಾಳ್, ಅದನ್ನು ಒಪ್ಪಿಕೊಳ್ಳುತ್ತಾನೆ ಮತ್ತು ವಿವಾಹಕ್ಕೆ ಸಿದ್ಧತೆಗಳನ್ನು ಮಾಡಲು ಆದೇಶಿಸುತ್ತಾನೆ. ಒಂದು ಅದ್ದೂರಿಯ ವಿವಾಹವು ನಡೆಯುತ್ತದೆ, ಧರ್ಮವರ್ಮನು ಉರೈಯೂರ್ ನಾಚ್ಚಿಯಾರನ್ನು ನಂಪೆರುಮಾಳ್ ಗೆ ನೀಡುತ್ತಾನೆ, ಹೇಗೆ ಜನಕರಾಜನು ಸೀತಾ ಪಿರಾಟ್ಟಿಯನ್ನು ಶ್ರೀ ರಾಮನಿಗೆ ನೀಡಿದನೋ ಹಾಗೆ. ರಾಜನು ನಂಪೆರುಮಾಳ್ ಗೆ ಬಹು ಸಂಪತ್ತನ್ನು ಶ್ರೀಧನವಾಗಿ ಕೊಡುತ್ತಾನೆ ಮತ್ತು ತನ್ನ ರಾಜ್ಯದ ಆಳ್ವಿಕೆಯನ್ನು ಮುಂದುವರಿಸುತ್ತಾನೆ.

ಅದೇ ಕಾಲದಲ್ಲಿ, ತಿರುಪ್ಪಾಣಾಳ್ವಾರರು ಕಾರ್ತಿಗೈ ಮಾಸ, ರೋಹಿಣಿ ನಕ್ಷತ್ರದಲ್ಲಿ ಎಲ್ಲ ಕರ್ತವ್ಯಗಳನ್ನೂ ಮುಗಿಸಿದವರಂತೆ(ಮತ್ತು ಬೇರೆ ಯಾವುದೇ ಋಣವಿಲ್ಲದವರಂತೆ), ಪಂಚಮ ಕುಲದಲ್ಲಿ ಉದಯಿಸುತ್ತಾರೆ. ಅವರ ವೈಭವಗಳನ್ನು ಕಂಡು ಗರುಡವಾಹನ ಪಂಡಿತರು ದಿವ್ಯ ಸೂರಿ ಚರಿತೆಯಲ್ಲಿ ಅವರು ಶ್ರೀವತ್ಸದಂತೆ (ಶ್ರೀಮನ್ ನಾರಾಯಣನ ಎದೆಯಲ್ಲಿರುವ ದಿವ್ಯವಾದ ಮಚ್ಚೆ) ಎಂದಿದ್ದಾರೆ – ಎಲ್ಲ ಆಳ್ವಾರರುಗಳೂ ಎಂಪೆರುಮಾನನನಿಂದ ಸಂಸಾರದಿಂದ ಆರಿಸಲ್ಪಟ್ಟು ನಿಷ್ಕಳಂಕ ಜ್ಞಾನದಿಂದ ಅನುಗ್ರಹಿಸಲ್ಪಟ್ಟಿದ್ದರೂ ಸಹ.

ಜಾಯಮಾನಮ್ ಹಿ ಪುರುಷಮ್ ಯಮ್ ಪಶ್ಯೇನ್ ಮಧುಸೂದನ: |
ಸಾತ್ವಿಕಸ್ಸ ತು ವಿಜ್ಞೇಯಸ್ ಸ ವೈ ಮೋಕ್ಷಾರ್ಥ ಚಿಂತಕ: ||

ಯಾವಾಗ ಮಧುಸೂದನನ್ ಎಂಪೆರುಮಾನನು ಒಬ್ಬ ಜೀವಾತ್ಮನನ್ನು ಹುಟ್ಟಿನಲ್ಲಿಯೇ ಆಶೀರ್ವದಿಸುತ್ತಾನೋ, ಆತನು ಶುದ್ಧ ಸತ್ತ್ವಗುಣಗಳೊಂದಿಗೆ ಜನಿಸುತ್ತಾನೆ. ಅಂತಹ ಜೀವಾತ್ಮನು ಸಂಪೂರ್ಣವಾಗಿ ಮೋಕ್ಷದ ಮೇಲೆಯೇ ತನ್ನ ಗಮನವನ್ನು ಕೇಂದ್ರೀಕರಿಸುತ್ತಾನೆ.

ಮಹಾಭಾರತದಲ್ಲಿ ಈ ಮೇಲಿನ ಶ್ಲೋಕದಲ್ಲಿ ಹೇಳಿರುವಂತೆ, ಎಂಪೆರುಮಾನನು ಆಳ್ವಾರರನ್ನು ಅವರ ಜನನದಲ್ಲಿಯೇ ಆಶೀರ್ವದಿಸಿದ್ದುದರಿಂದ, ಅವರು ಶುದ್ಧ ಸತ್ತ್ವಗುಣಗಳೊಂದಿಗೆ ಜನಿಸುತ್ತಾರೆ, ಮತ್ತು ನಾರದ ಭಗವಾನರಂತೆ (ಎಂಪೆರುಮಾನನೊಂದಿಗೆ ನಿಕಟ ಬಾಂಧವ್ಯವನ್ನು ಹೊಂದಿ ಮತ್ತು ನಿರಂತರವೂ ಆತನನ್ನು ಸ್ತುತಿಸುವವರು), ಮತ್ತು ನಂಪಾಡುವಾನನಂತೆ (ತಿರುಕ್ಕುರುಂಗುಡಿ ನಂಬಿಯ ಬಗ್ಗೆ ಹಾಡುವುದು ಮತ್ತು ಸ್ತುತಿಸುವುದರಲ್ಲಿ ನಿರತನಾಗಿದ್ದವನು) ಕೈಶಿಕ ಪುರಾಣದಲ್ಲಿ ವಿವರಿಸಿರುವಂತೆ ಬ್ರಹ್ಮರಾಕ್ಷಸನನ್ನು (ರಾಕ್ಷಸನಾದ ಬ್ರಾಹ್ಮಣ) ತನ್ನ ಎಲ್ಲ ಪಾಪಗಳಿಂದ ಮುಕ್ತಗೊಳಿಸಿದವನು. ಅವರ ವೈಭವಗಳನ್ನು ನೋಡಿದರೆ, ಎಂಪೆರುಮಾನನನ್ನು ಹಾಡುವುದು ಮತ್ತು ಹೊಗಳುವುದಕ್ಕಾಗಿಯೇ ನಿತ್ಯಸೂರಿಯೊಬ್ಬರು ಜನ್ಮತಾಳಿದರೆಂದೆನಿಸುತ್ತದೆ. ವರ್ಣಾಶ್ರಮ ಧರ್ಮವನ್ನು ಅನುಸರಿಸುತ್ತಾ, ಶ್ರೀರಂಗಕ್ಕೆ ಕಾಲಿಡದೆ, ಪ್ರತಿದಿನ ಅವರು ನದಿಯ ದಕ್ಷಿಣ ದಡದಲ್ಲಿ ನಿಂತು, ಶ್ರೀ ರಂಗನಾಥನ ಕಡೆ ಮುಖ ಮಾಡಿ, ತನ್ನ ಬಲಗೈಯಲ್ಲಿ ಸುದರ್ಶನ ಚಕ್ರವನ್ನು ಹಿಡಿದಿರುವ ಶ್ರೀಮನ್ನಾರಾಯಣನಿಗೆ ಸಂಪೂರ್ಣ ಶರಣಾಗತರಾದವರಂತೆ, ನಿರಂತರವಾಗಿ ಪೆರಿಯ ಪೆರುಮಾಳರನ್ನು ಹಾಡುತ್ತಾರೆ ಮತ್ತು ವೈಭವೀಕರಿಸತ್ತಾರೆ, ಸಹಜವಾದ ಭಾವಗಳೊಂದಿಗೆ. ಪೆರಿಯ ಪೆರುಮಾಳ್ ಸಹ ಆಳ್ವಾರರ ಗಾನ ಮತ್ತು ಸ್ತುತಿಗಳನ್ನು ಅತ್ಯಾನಂದದಿಂದ ಅನುಭವಿಸುತ್ತಾನೆ.

ಒಮ್ಮೆ, ಶ್ರೀ ಲೋಕಸಾರಂಗ ಮಹಾಮುನಿಗಳು ಕೈಂಕರ್ಯಕ್ಕೆ ತೀರ್ಥವನ್ನು ತರಲು ಆಳ್ವಾರರು ಇರುವೆಡೆಗೆ ಬರುತ್ತಾರೆ. ಅವರು ಆಳ್ವಾರರು ತಮ್ಮ ಅನುಭವದಲ್ಲಿ ತಲ್ಲೀನರಾಗಿರುವುದನ್ನು ನೋಡುತ್ತಾರೆ, ಆದರೆ ಅವರ ಜನ್ಮವನ್ನು ಪರಿಗಣಿಸಿ, ತಾವು ಜಲವನ್ನು ತೆಗೆದುಕೊಳ್ಳುವುದಕ್ಕಾಗಿ ಅವರನ್ನು ದೂರ ಹೋಗುವಂತೆ ಹೇಳುತ್ತಾರೆ. ಆಳ್ವಾರರು ಭಗವದನುಭವದಲ್ಲಿ ತಲ್ಲೀನರಾಗಿದ್ದರಿಂದ, ಮಹಾಮುನಿಗಳ ಮಾತುಗಳು ಅವರಿಗೆ ಕೇಳಿಸಲಿಲ್ಲ/ತಿಳಿಯಲಿಲ್ಲ. ಮಹಾಮುನಿಗಳು ಆಳ್ವಾರರ ಕಡೆಗೆ ಒಂದು ಕಲ್ಲನ್ನು ಎಸೆಯುತ್ತಾರೆ, ಅದು ಅವರ ಹಣೆಗೆ ಬೀಳುತ್ತದೆ ಮತ್ತು ರಕ್ತವು ಹರಿಯಲು ಶುರುವಾಗುತ್ತದೆ. ತಮ್ಮ ಕ್ರಿಯೆಯನ್ನು ಅರಿತು, ಮಹಾಮುನಿಗಳ ಕೈಂಕರ್ಯಕ್ಕೆ ಅಡ್ಡಬಂದುದಕ್ಕಾಗಿ ಆಳ್ವಾರರು ಕೂಡಲೇ ಬಹು ವ್ಯಥೆಪಡುತ್ತಾರೆ, ಕ್ಷಮೆ ಯಾಚಿಸುತ್ತಾರೆ ಮತ್ತು ಕ್ಷಿಪ್ರವಾಗಿ ದೂರ ಹೋಗುತ್ತಾರೆ. ನಂತರ ಲೋಕಸಾರಂಗ ಮಹಾಮುನಿಗಳು ಸ್ನಾನ ಮಾಡಿ, ತಮ್ಮ ನಿತ್ಯ ಕರ್ಮಾನುಷ್ಠಾನಗಳನ್ನು ಮುಗಿಸುತ್ತಾರೆ, ಮತ್ತು ಛತ್ರ, ಚಾಮರ, ಮೇಳ, ತಾಳ, ಇತ್ಯಾದಿಗಳೊಂದಿಗೆ (ಎಂಪೆರುಮಾನನಿಗೆ ತೀರ್ಥವನ್ನು ತರಲು ಇರುವ ಸಂಪ್ರದಾಯದಂತೆ) ಪೆರಿಯ ಪೆರುಮಾಳ್ ಕೈಂಕರ್ಯಕ್ಕೆ ತೀರ್ಥವನ್ನು ತೆಗೆದುಕೊಂಡು ಹೋಗುತ್ತಾರೆ. ಲೋಕಸಾರಂಗ ಮುನಿಗಳ ವರ್ತನೆಯಿಂದ ಪೆರಿಯ ಪೆರುಮಾಳ್ ಅಸಮಾಧಾನಗೊಂಡುದನ್ನು ಕಂಡು, ನಾಚ್ಚಿಯಾರ್ ಪೆರುಮಾಳರನ್ನು ಕೇಳುತ್ತಾಳೆ “ನಾವು ಪಾಣ್ ಪೆರುಮಾಳರನ್ನು (ಆಳ್ವಾರರನ್ನು ಅಕ್ಕರೆಯಿಂದ ಕರೆಯುವ ಹೆಸರು) ನಮ್ಮ ಸನ್ನಿಧಿಯಿಂದ ಹೊರಗಿರಲು ಬಿಡಬಹುದೇ?”. ಪೆರಿಯ ಪೆರುಮಾಳ್ ತಕ್ಷಣವೇ ತಮ್ಮ ಸನ್ನಿಧಿಯ ದ್ವಾರಗಳನ್ನು ಮುಚ್ಚುತ್ತಾರೆ ಮತ್ತು ಕೋಪದಿಂದ ಲೋಕಸಾರಂಗ ಮುನಿಗಳನ್ನು ಕೇಳುತ್ತಾರೆ “ನನ್ನ ಪ್ರಿಯನಾದ ಭಕ್ತನಿಗೆ ನೀವು ಹೀಗೆ ಮಾಡಬಹುದೇ?”. ಲೋಕಸಾರಂಗರು ಕೂಡಲೇ ತಮ್ಮ ತಪ್ಪನ್ನು ಅರಿತುಕೊಳ್ಳುತ್ತಾರೆ ಮತ್ತು ತಮ್ಮ ಬಗ್ಗೆ ತಾವೇ ಬಹಳ ಅಸಮಾಧಾನಗೊಳ್ಳುತ್ತಾರೆ. ನಂತರ ಅವರು ಪೆರಿಯ ಪೆರುಮಾಳರನ್ನು ಕೇಳುತ್ತಾರೆ “ನಾನು ಈ ದೊಡ್ಡ ಭಾಗವತ ಅಪಚಾರವನ್ನು ಮಾಡಿದ್ದೇನೆ. ಈ ದೊಡ್ಡ ಪ್ರಮಾದದಿಂದ ನನ್ನನ್ನು ಹೇಗೆ ಪಾರುಮಾಡಬಹುದು?”. ಪಾಣ್ ಪೆರುಮಾಳರ ಬಗ್ಗೆ ಅತಿ ಕಾರುಣ್ಯದಿಂದಾಗಿ ಮತ್ತು ತನ್ನ ಸಂಪೂರ್ಣ ಸ್ವಾತಂತ್ರ್ಯದಿಂದಾಗಿ (ಯಾರಿಂದಲೂ ಪ್ರಶ್ನಿಸಲಾಗದ) ಪೆರಿಯ ಪೆರುಮಾಳ್ ಉತ್ತರಿಸುತ್ತಾರೆ “ನೀವು ಈಗ ಹೋಗಿ ಅವರನ್ನು ನಿಮ್ಮ ಭುಜಗಳ ಮೇಲೆ ಕೂಡಿಸಿಕೊಂಡು ಬಹು ಭಕ್ತಿಯಿಂದ ಕರೆದು ತರಬೇಕು” ಎಂದು ಆ ರಾತ್ರಿ ಸ್ವಪ್ನದಲ್ಲಿ ಹೇಳುತ್ತಾರೆ. ಲೋಕಸಾರಂಗರು ಬೆಳಗಿನ ಜಾವ ಶೀಘ್ರವಾಗಿ ಏಳುತ್ತಾರೆ ಮತ್ತು ಈ ದಿನವು ತಮಗೆ ಒಂದು ಶ್ರೇಷ್ಠವಾದ ದಿನವೆಂದು ಭಾವಿಸುತ್ತಾರೆ, ಅಕ್ರೂರನು ಭಾವಿಸಿದ ಹಾಗೆ “ಅದ್ಯಮೇ ಸಫಲಮ್ ಜನ್ಮ ಸುಪ್ರಭಾತಾ ಚ ಮೇ ನಿಚಾ” ಅರ್ಥಾತ್ ಇಂದು ನನ್ನ ಜನ್ಮವು ಸಾರ್ಥಕವಾಯಿತು ಮತ್ತು ಇಂದಿನ ಸೂರ್ಯೋದಯವು ಮಹತ್ವದ್ದಾಗಿದೆ ಏಕೆಂದರೆ ಕಂಸನು ತನ್ನನ್ನು ಬಲರಾಮ/ಕೃಷ್ಣರನ್ನು ಮಥುರೆಗೆ ಕರೆತರಲು ಕಳುಹಿಸಿದ್ದಾನೆ. ಅವರು ನಿರ್ಮಲವಾದ ಹೃದಯವುಳ್ಳ ಭಕ್ತರೊಂದಿಗೆ ಕಾವೇರಿ ನದಿಗೆ ಹೋಗುತ್ತಾರೆ, ಸ್ನಾನ ಮಾಡುತ್ತಾರೆ, ಮತ್ತು ನಿತ್ಯಾನುಷ್ಠಾನಗಳನ್ನು ಮಾಡುತ್ತಾರೆ.

“ಸುದೂರಮಪಿ ಗಂತವ್ಯಮ್ ಯತ್ರ ಭಾಗವತ: ಸ್ಥಿತ:” ಅರ್ಥಾತ್ “ಒಬ್ಬ ಭಾಗವತರು ಬಹಳ ದೂರದಲ್ಲಿದ್ದರೂ ಕೂಡ ಅವರ ಬಳಿಗೆ ಹೋಗಿ ಸೇವೆ ಮಾಡಬೇಕು” ಎಂದು ಹೇಳಿರುವ ಹಾಗೆ, ಲೋಕಸಾರಂಗ ಮುನಿಗಳು ಶ್ರೀರಂಗದಿಂದ ಇನ್ನೂ ದೂರದಲ್ಲಿ ನಿಂತಿರುವ ತಿರುಪ್ಪಾಣಾಳ್ವಾರ್ ಇರುವ ಕಡೆಗೆ ಹೋಗುತ್ತಾರೆ. ಆಳ್ವಾರರು ಸುಂದರವಾದ ಉದ್ಯಾನಗಳು, ಇತ್ಯಾದಿಗಳಿಂದ ಕೂಡಿದ ಶ್ರೀರಂಗದ ದಿಕ್ಕಿನಲ್ಲಿ ಮುಖಮಾಡಿ ನಿಂತಿದ್ದಾರೆ ಮತ್ತು ಶ್ರೀರಂಗನಾಥನನ್ನು ಸ್ತುತಿಸುತ್ತಿದ್ದಾರೆ. ಲೋಕಸಾರಂಗ ಮುನಿಗಳು ಆಳ್ವಾರರ ಪಾದಾರವಿಂದಗಳಲ್ಲಿ ಬೀಳುತ್ತಾರೆ ಮತ್ತು ನಂಪೆರುಮಾಳರ ಆದೇಶದಂತೆ ಅವರು ಶ್ರೀರಂಗವನ್ನು ಪ್ರವೇಶಿಸುವಂತೆ ಕೇಳಿಕೊಳ್ಳುತ್ತಾರೆ. ಆಳ್ವಾರರು ನಿರಾಕರಿಸುತ್ತಾರೆ ಮತ್ತು ತಾವು ಕೀಳುವರ್ಗದವರಾಗಿದ್ದು, ಚತುರ್ವರ್ಣದಲ್ಲಿ ಜನಿಸಿಲ್ಲವಾದ್ದರಿಂದ ಶ್ರೀರಂಗದಲ್ಲಿ ತಮ್ಮ ಪಾದಾರವಿಂದವನ್ನು ಇಡಲು ಅನರ್ಹರೆಂದು ಹೇಳುತ್ತಾರೆ. ಶ್ರೀ ಲೋಕಸಾರಂಗ ಮುನಿಗಳು ತಕ್ಷಣವೇ ಹೇಳುತ್ತಾರೆ “ಓಹೋ ಹೌದು! ನೀವು ನಿಮ್ಮ ಪಾದಾರವಿಂದಗಳನ್ನು ಶ್ರೀರಂಗದಲ್ಲಿ ಇಡಬಾರದು ಆದರೆ ನೀವು ಖಂಡಿತವಾಗಿ ನನ್ನ ಭುಜಗಳ ಮೇಲೆ ಕುಳಿತುಕೊಳ್ಳಬಹುದು ಮತ್ತು ನಾನು ನಿಮ್ಮನ್ನು ನೇರವಾಗಿ ಶ್ರೀ ರಂಗನಾಥನ ಬಳಿಗೆ ಕರೆದುಕೊಂಡುಹೋಗುತ್ತೇನೆ. ಪೆರಿಯ ಪೆರುಮಾಳರ ಆಜ್ಞೆಯಂತೆ ನಾನು ನಿಮಗೆ ಹೀಗೆ ಮಾಡಲು ಒತ್ತಾಯಿಸುತ್ತೇನೆ”. ಆಳ್ವಾರರು ಭಗವಾನ್ ಮತ್ತು ಭಾಗವತರಿಗೆ ಪೂರ್ಣವಾಗಿ ಶರಣಾಗತರಾಗಿದ್ದರಿಂದ, ಪೆರಿಯ ಪೆರುಮಾಳ್ ಮತ್ತು ಲೋಕಸಾರಂಗರ ಮಾತುಗಳನ್ನು ನಿರಾಕರಿಸಲಾಗದೆ, ಆ ಮಾತುಗಳನ್ನು ಒಪ್ಪಿಕೊಳ್ಳುತ್ತಾರೆ ಮತ್ತು ತಮಗೆ ಎಂಪೆರುಮಾನನ ಅತ್ಯಂತ ಕಾರುಣ್ಯದ ಉಪಕಾರಗಳನ್ನು ಸ್ಮರಿಸಲು ಪ್ರಾರಂಭಿಸುತ್ತಾರೆ ಮತ್ತು ತಮ್ಮ ಎಲ್ಲ ಹೊಣೆಗಾರಿಕೆಗಳನ್ನು ಬಿಟ್ಟುಕೊಡುತ್ತಾರೆ ಮತ್ತು ಲೋಕಸಾರಂಗ ಮುನಿಗಳಿಗೆ ತಮ್ಮನ್ನು ಅರ್ಪಿಸುತ್ತಾರೆ. ಶ್ರೀ ಲೋಕಸಾರಂಗ ಮಹಾಮುನಿಗಳು ಅತೀವ ಸಂತೋಷದಿಂದ ಆಳ್ವಾರರನ್ನು ಎತ್ತಿ ತಮ್ಮ ಭುಜಗಳ ಮೇಲೆ ಕೂಡಿಸಿಕೊಳ್ಳುತ್ತಾರೆ ಮತ್ತು ಶ್ರೀರಂಗದ ಕಡೆಗೆ ಅವರನ್ನು ಕರೆದುಕೊಂಡು ಹೋಗುತ್ತಾರೆ, ಹೇಗೆ ಆದಿವಾಹಿಕರು (ಜೀವಾತ್ಮರನ್ನು ತಮ್ಮ ಅಂತಿಮ ಪ್ರಯಾಣದಲ್ಲಿ  ಪರಮಪದದೆಡೆಗೆ ಕರೆದೊಯ್ಯುವವರು) ಮುಕ್ತರಾಗುವ ಜೀವಾತ್ಮರನ್ನು ತಿರುಮಾಮಣಿ ಮಂಟಪಕ್ಕೆ (ದಿವ್ಯಾಭರಣಗಳಿಂದ ಅಲಂಕೃತವಾದ ದಿವ್ಯ ಮಹಿಷಿಗಳು ಮತ್ತು ನಿತ್ಯಸೂರಿಗಳೊಂದಿಗೆ ಪರಮಪದನಾಥನು ಕುಳಿತಿರುವ ದಿವ್ಯವಾದ ಮಂಟಪ) ಕರೆತರುತ್ತಾರೋ ಹಾಗೆ.

ಗಮನಿಸಿ: ಈ ಚರಿತ್ರೆಯನ್ನು ಅಳಗಿಯ ಮಣವಾಳ ಪೆರುಮಾಳ್ ನಾಯನಾರರು ಆಚಾರ್ಯ ಹೃದಯಂ ನ 85ನೆಯ ಚೂರ್ಣಿಕೆಯಲ್ಲಿ ಸುಂದರವಾಗಿ ತೋರಿಸಿದ್ದಾರೆ.

tiruppanazhwar2
ಲೋಕಸಾರಂಗ ಮಹಾಮುನಿ, ತಿರುಪ್ಪಾಣಾಳ್ವಾರ್, ನಂಪೆರುಮಾಳ್

ಪೆರಿಯ ಪೆರುಮಾಳ್ ನಿತ್ಯಸೂರಿಗಳಿಗೆ ತೋರಿಸುವ ತನ್ನ ದಿವ್ಯ ರೂಪವನ್ನು ಆಳ್ವಾರರ ಮುಂದೆ ಪ್ರಕಟಪಡಿಸುತ್ತಾರೆ ಮತ್ತು ಆಳ್ವಾರರು ತಮ್ಮ ದೈವಿಕ ವೀಣೆಯ ಸಂಗೀತದೊಂದಿಗೆ ಅಮಲನಾದಿಪಿರಾನ್ ಹಾಡಲು ಪ್ರಾರಂಭಿಸುತ್ತಾರೆ ಮತ್ತು 9 ಪಾಶುರಗಳನ್ನು ಸನ್ನಿಧಿಯ ಹೊರಗೆ ಹಾಡುತ್ತಾರೆ. ಅವರು ಪೆರಿಯ ಪೆರುಮಾಳ ಸನ್ನಿಧಿಯನ್ನು ಪ್ರವೇಶಿಸಿದ ತಕ್ಷಣವೇ, ಪೆರಿಯ ಪೆರುಮಾಳ್ ಅವರ ಮುಂದೆ ಸುಂದರವಾಗಿ ಪ್ರತ್ಯಕ್ಷನಾಗುತ್ತಾನೆ, ಈ ಕೆಳಗೆ ಶ್ರೀರಂಗ ಮಾಹಾತ್ಮ್ಯದಲ್ಲಿ ವರ್ಣಿಸಿರುವ ಹಾಗೆ:

ಬ್ರಹ್ಮನು ಶ್ರೀರಂಗನಾಥನನ್ನು ಪೂಜಿಸಿದನು, ಸುಂದರವಾದ ಕಿರೀಟ, ತೋಳ್ಬಳೆಗಳಿಂದ ಅಲಂಕೃತನಾದ, ವಜ್ರಗಳು ಮತ್ತು ಅಮೂಲ್ಯ ರತ್ನಗಳಿಂದ ಮಾಡಿದ ಸುಂದರವಾದ ಕುಂಡಲಗಳಿಂದ ಕೂಡಿದ, ಸುಂದರವಾದ ರತ್ನಹಾರ ಮತ್ತು ಶುದ್ಧವಾದ ಮುತ್ತುಗಳಿಂದ ಮಾಡಿದ ಮಾಲೆಗಳನ್ನು ಧರಿಸಿದ, ಕೌಸ್ತುಭಮಣಿಯಿ ವಿಶಾಲವಾದ ಎದೆಯಿಂದ ಶೋಭಿಸುತ್ತಿರುವ, ಶ್ರೀ ಮಹಾಲಕ್ಷ್ಮಿಯ ಶಾಶ್ವತ ನೆಲೆಯಾದ ಬಹು ಪೌರುಷದ ವಕ್ಷಸ್ಥಳದಿಂದ ಕೂಡಿದ, ಕರಗಿಸಿದ ಚಿನ್ನದಂತೆ ಪ್ರಕಾಶಿಸುತ್ತಿರುವ ಸುಂದರವಾದ ಪೀತಾಂಬರಧಾರಿಯಾದ, ಸುಂದರವಾದ ಒಡ್ಯಾಣವನ್ನು ಧರಿಸಿರುವ, ತನ್ನ ಪಾದಾರವಿಂದಗಳಲ್ಲಿ ಸುಂದರವಾದ ಕಾಲ್ಗೆಜ್ಜೆಗಳನ್ನು ಧರಿಸಿದ, ಸುಂದರವಾದ ಮತ್ತು ಮೃದುವಾದ ಯಜ್ಗ್ನೋಪವೀತವನ್ನು ಧರಿಸಿದ, ಆಕರ್ಷಕವಾಗಿ ಒಂದು ಕೈಯನ್ನು ತನ್ನ ಶಿರಕ್ಕೆ ಆಧಾರವಾಗಿ ಹಿಡಿದ ಮತ್ತು ಇನ್ನೊಂದು ಕೈಯನ್ನು ತನ್ನ ಪಾದಾರವಿಂದಗಳ ಕಡೆಗೆ ಚಾಚಿದ, ಸ್ವಲ್ಪ ಮಡಿಚಿದ ಮತ್ತು ಎತ್ತರಿಸಿದ ಪಾದಾರವಿಂದಗಳಿಂದ ಕೂಡಿದ, ಸುಂದರವಾದ ಮತ್ತು ನೀಳವಾದ ರೂಪವುಳ್ಳ, ಎತ್ತರಿಸಿದ ಮತ್ತು ಸುಂದರವಾಗಿ ಅಲಂಕೃತವಾದ ಭುಜಗಳುಳ್ಳ, ತಿರುವನಂತಾಳ್ವಾನ್ (ಆದಿಶೇಷ) ನ ಮೇಲೆ ಪವಡಿಸಿದವನಾದವನು.

ಬ್ರಹ್ಮಾದಿಯಾಗಿ ಎಲ್ಲರಿಂದಲೂ ಪೂಜಿಸಲ್ಪಡುವ ಇಂತಹಾ ಭವ್ಯವಾದ ಎಂಪೆರುಮಾನನ ಸನ್ನಿಧಿಗೆ ಪ್ರವೇಶಿಸಿದ ನಂತರ ಆಳ್ವಾರರು, ತನ್ನನ್ನು ಪೋಷಿಸುವ ತಾಯಿಯ ಸ್ತನಗಳನ್ನು ಅರಸುವ ಎಳೆಮಗುವಿನ ಹಾಗೆ, ಎಂಪೆರುಮಾನನ ಪಾದಾರವಿಂದಗಳನ್ನು ಅರಸುತ್ತಾರೆ, ಏಕೆಂದರೆ ಶರಣಾದವರು ತಮ್ಮ ಪ್ರಭುವಿನ ಪಾದಾರವಿಂದಗಳಲ್ಲಿ ಸದಾಕಾಲವೂ ಧ್ಯಾನ ಮತ್ತು ಸ್ತೋತ್ರಗಳನ್ನು ಮಾಡುವುದನ್ನೇ ಆಸರೆಯಾಗಿಟ್ಟುಕೊಂಡಿರುತ್ತಾರೆ. ಆದ್ದರಿಂದಲೇ ಆಳ್ವಾರರು ತಮ್ಮ ಮೊದಲನೆಯ ಪಾಶುರದಲ್ಲೇ ಹೀಗೆ ಹೇಳಿದ್ದಾರೆ “ಅರಙ್ಗತ್ತಮ್ಮಾನ್ ತಿರುಕ್ಕಮಲಪಾದಮ್ ವಣ್ದು ಎನ್ ಕಣ್ಣಿನುಳ್ಳನ ಒಕ್ಕಿನ್ಡ್ರದೇ” ಅರ್ಥಾತ್ “ನನ್ನ ಪ್ರಭುವಾದ ಶ್ರೀ ರಂಗನಾಥನ ಪಾದಾರವಿಂದಗಳು ಹೊರಗೆ ಬಂದು ನನ್ನ ಕಣ್ಣುಗಳೊಳಗೆ ಪ್ರವೇಶಿಸಿವೆ”. ಅರಙ್ಗತ್ತಮ್ಮಾನ್ ಶೇಷತ್ವವನ್ನು ಸೂಚಿಸುತ್ತದೆ (ಎಂಪೆರುಮಾನ್ ಪ್ರಭುವಾಗಿರುವುದು), ಕಮಲವು ಭೋಗ್ಯತ್ವವನ್ನು ಸೂಚಿಸುತ್ತದೆ, ಮತ್ತು ಪಾದವು ಉಪಾಯತ್ವವನ್ನು (ಗುರಿಯನ್ನು ತಲುಪುವ ದಾರಿ) ಸೂಚಿಸುತ್ತದೆ. ಪೆರಿಯಾಳ್ವಾರ್ ಸಹ ಎಂಪೆರುಮಾನನನ್ನು ಆತನ ಪಾದಕಮಲಗಳಿಂದ ಹಿಡಿದು ಶಿರಸ್ಸಿನ ವರೆಗೆ ತಮ್ಮ ಪೆರಿಯಾಳ್ವಾರ್ ತಿರುಮೊಳಿಯ 2 ನೆಯ ಪದಿಗದ 20 ಪಾಶುರಗಳಲ್ಲಿ ವೈಭವೀಕರಿಸಿದ್ದಾರೆ.

ಅದೇ ರೀತಿ, ಪೆರಿಯ ಪೆರುಮಾಳರ ದೈವಿಕ ಆದೇಶದಂತೆ ಲೋಕಸಾರಂಗ ಮಹಾಮುನಿಗಳ ಮೂಲಕ ತಿರುಪ್ಪಾಣಾಳ್ವಾರರು, ಪೆರಿಯ ಪೆರುಮಾಳರನ್ನು ಪಾದಾರವಿಂದಗಳಿಂದ ಹಿಡಿದು ಶಿರಸ್ಸಿನವರೆಗೆ ಆನಂದಿಸಿದರು ಮತ್ತು ಆ ಉಕ್ಕಿಹರಿಯುವ ಭಾವೋದ್ವೇಗವು ಅಮಲನಾದಿಪಿರಾನ್ ಎಂಬ ದಿವ್ಯಪ್ರಬಂಧವಾಗಿ ಪರಿಣಮಿಸಿತು, ಇದು ನಮ್ಮ ಸಂಪ್ರದಾಯದ ಸಾರವನ್ನು ಕೊಡುತ್ತದೆ – ತಿರುಮಂತ್ರ ಅರ್ಥ – ತಿರುಮಂತ್ರದ ವಿಸ್ತಾರವಾದ ವಿವರಣೆ. ಪೆರಿಯ ಪೆರುಮಾಳ್ ತಿರುಪ್ಪಾಣಾಳ್ವಾರರನ್ನು ಆ ಕ್ಷಣವೇ ಅದೇ ತಿರುಮೇನಿಯೊಂದಿಗೆ ಎಲ್ಲರ ಮುಂದೆ ಸ್ವೀಕರಿಸಿದರು. ಪೆರಿಯ ಪೆರುಮಾಳರ ಪಾದಾರವಿಂದಗಳ ಮೂಲಕ ಆಳ್ವಾರರು ಪರಮಪದವನ್ನು ಸೇರಿದರು.

ಅವರ ತನಿಯನ್:

ಆಪಾದ ಚೂಡಮ್ ಅನುಭೂಯ ಹರಿಮ್ ಶಯಾನಮ್
ಮಧ್ಯೇ ಕವೇರ ದುಹಿತುರ್ ಮುದಿತಾನ್ತರಾತ್ಮಾ |
ಅದ್ರಶ್ಟ್ರುತಾಮ್ ನಯನಯೋರ್ ವಿಷಯಾಂತರಾಣಾಮ್
ಯೋ ನಿಶ್ಚಿಕಾಯ ಮನವೈ ಮುನಿವಾಹನಮ್ ತಮ್ ||

ಅವರ ಅರ್ಚಾವತಾರ ಅನುಭವವನ್ನು ಇಲ್ಲಿ ಈಗಾಗಲೇ ವಿವರಿಸಲಾಗಿದೆ:
http://ponnadi.blogspot.in/2012/10/archavathara-anubhavam-thiruppanazhwar.html.

ಅಡಿಯೇನ್ ಪಾರ್ಥಸಾರಥಿ ರಾಮಾನುಜ ದಾಸನ್

ಮೂಲ : https://guruparamparai.koyil.org/2013/01/21/thiruppanazhwar/

ರಕ್ಷಿತ ಮಾಹಿತಿ:  https://guruparamparai.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org