ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ:
ಹಿಂದಿನ ಲೇಖನದಲ್ಲಿ (https://guruparamparai.koyil.org/2018/03/12/embar/) ನಾವು ಎಂಬಾರ್ ಕುರಿತು ಚರ್ಚಿಸಿದ್ದೇವೆ. ಈಗ ನಾವು ಓರಾನ್ ವೞಿ ಗುರು ಪರಂಪರೆಯಲ್ಲಿ ಮುಂದಿನ ಆಚಾರ್ಯರ ಬಗ್ಗೆ ತಿಳಿದುಕೊಳ್ಳೋಣ.
ಪರಾಶರ ಭಟ್ಟರ್ (ತನ್ನ ತಿರುವಡಿಯಲ್ಲಿ ನಂಜೀಯರ್ ಜೊತೆ) – ಶ್ರೀರಂಗಂ
ತಿರುನಕ್ಷತ್ರಮ್ : ವೈಖಾಸಿ ಅನುಷಮ್
ಅವತಾರ ಸ್ಥಲಂ : ಶ್ರೀರಂಗಂ
ಆಚಾರ್ಯಾನ್ : ಎಂಬಾರ್
ಶಿಷ್ಯರು :ನಂಜೀಯರ್
ಅವರು ಪರಮಪದವನ್ನು ಪಡೆದುಕೊಂಡ ಸ್ಥಳ: ಶ್ರೀರಂಗಂ
ಕೃತಿಗಳು: ಅಷ್ಟಶ್ಲೋಕೀ , ಶ್ರೀ ರಂಗರಾಜ ಸ್ತವಮ್ , ಶ್ರೀ ಗುಣರತ್ನ ಕೋಶಂ , ಭಗವಧ್ ಗುಣ ದರ್ಪಣಂ (ವಿಷ್ಣು ಸಹಸ್ರನಾಮ ವ್ಯಾಖ್ಯಾನಂ ), ಶ್ರೀರಂಗರಾಜ ಸ್ತೋತ್ರಂ
ಪರಾಶರ ಭಟ್ಟರ್ ಅವರು ಕೂರತ್ತಾಳ್ವಾನ್ ಮತ್ತು ಅಂಡಾಳ್ ಅಮ್ಮಂಗಾರವರ ಸುಪ್ರಸಿದ್ಧ ಪುತ್ರರಾಗಿದ್ದರು . ಅವರು ಮತ್ತು ಅವರ ಕಿರಿಯ ಸಹೋದರ ವೇದ ವ್ಯಾಸ ಭಟ್ಟರ್, ಅವರು ಆಂಡಾಳಿಗೆ , ಶ್ರೀರಂಗನಾಥನ ಪ್ರಸಾದ ಸೇವನೆಯಿಂದ ಹುಟ್ಟಿದರು.
ಇಬ್ಬರೂ ಭಟ್ಟರ್ಗಳು ಆೞ್ವಾನ್ ಮತ್ತು ಅಂಡಾಳ್ ಅವರಿಗೆ ಪೆರಿಯ ಪೆರುಮಾಳ್ (ಶ್ರೀ ರಂಗನಾಥನ್) ಪ್ರಸಾದ ಸೇವನೆದಿಂದ ಜನಿಸಿದರು. ಒಮ್ಮೆ ಆೞ್ವಾನ್ ಮತ್ತು ಅಂಡಾಳ್ ಯಾವುದೇ ಪ್ರಸಾದ (ಆೞ್ವಾನ್ ಉಂಜವೃತಿ ಮಾಡುತ್ತಿದ್ದರು ಮತ್ತು ಮಳೆಯಿಂದ ಆ ದಿನದಲ್ಲಿ ಅವರು ಯಾವುದೇ ಧಾನ್ಯಗಳನ್ನು ಸಂಗ್ರಹಿಸಲು ಸಾಧ್ಯವಾಗಲಿಲ್ಲ ) ಸೇವಿಸದೆ ಸಾಯಂಕಾಲ ಮಲಗುತ್ತಿದ್ದಾಗ, ಅವರು ದೇವಸ್ಥಾನದಿಂದ ಅಂತಿಮ ನೈವೇದ್ಯ ಗಂಟೆ ಕೇಳುತ್ತಾರೆ. ಆಂಡಾಳ್ ಎಂಪೆರುಮಾನ್ಗೆ ಹೇಳುತ್ತಾರೆ “ಇಲ್ಲಿ ನಿಮ್ಮ ಶುದ್ಧ ಭಕ್ತರಾದ ಆೞ್ವಾನ್ ಯಾವುದೇ ಪ್ರಸಾದ ಸೇವಿಸಲಿಲ್ಲ ಆದರೆ ನೀವು ಅಲ್ಲಿ ಉತ್ತಮ ಭೋಗವನ್ನು ಆನಂದಿಸುತ್ತಿದ್ದೀರಿ”.
ಪೆರಿಯ ಪೆರುಮಾಳ್ ಈ ವಿಷಯವನ್ನು ಅರಿತು, ಪ್ರಸಾದ ಉಪಕರಣಗಳನ್ನು ಅಂಡಾಳ್ ಮತ್ತು ಆೞ್ವಾನ್ಗೆ ಉತ್ತಮ ನಂಬಿಯವರ ಮೂಲಕ ಕಳುಹಿಸಿದರು . ಪ್ರಸಾದ ಬರುವುದನ್ನು ನೋಡಿ ಆೞ್ವಾನ್ ಬೆರಗಾದರು . ತತಕ್ಷಣ ಆೞ್ವಾನ್ ಅವರು ಅಂಡಾಳ್ ಕಡಗೆ ತಿರುಗಿ “ನೀನು ಎಂಪೆರುಮಾನ್ಗೆ ದೂರು ಮಾಡಿದೆಯಾ ? ” ಎಂದು ಕೇಳಿದರು, ಅದಕ್ಕೆ ಅಂಡಾಳ್ ತನ್ನ ಕೋರಿಕೆಯನ್ನು ಅಂಗೀಕರಿಸಿದರು. ಆೞ್ವಾನ್ ಎಂಪೆರುಮಾನ್ ರನ್ನು ಪ್ರಸಾದಮ್ ಕೊಡಲು ಒತ್ತಾಯ ಮಾಡಿದ್ದಕ್ಕೆ ಅಸಂತೋಷ ಕೊಂಡರು . ಅವರು ಎರಡು ಕೈತುಂಬಾ ಮಾತ್ರ ಪ್ರಸಾದವನ್ನು ತೆಗೆದುಕೊಂಡರು , ಸ್ವಲ್ಪ ಪ್ರಸಾದವನ್ನು ಅವರು ತಿಂದು ಮತ್ತು ಉಳಿದಿದ್ದನ್ನು ಆಂಡಾಳ್ ಗೆ ಕೊಟ್ಟರು.ಆ ಎರಡು ಕೈತುಂಬಾ ಪ್ರಸಾದದ ಪರಿಣಾಮವಾಗಿ ಎರಡು ಮುದ್ದಾದ ಮಕ್ಕಳನ್ನು ಆಶೀರ್ವಾದವಾಗಿ ಪಡೆದರು .
ಎಂಬಾರ್ ರವರು ಪರಾಶರ ಹಾಗು ವೇದವ್ಯಾಸ ಭಟ್ಟರಿಗೆ ಹನ್ನೊಂದು ದಿವಸ ಇದ್ದಾಗಲೇ ದ್ವಯ ಮಹಾ ಮಂತ್ರೋಪದೇಶಂ ವನ್ನು ಉಪದೇಶಿಸಿದ್ದರು ಮತ್ತು ಎಂಪೆರುಮಾನಾರ್ ಅವರಿಬ್ಬರಿಗೂ ಆಚಾರ್ಯನಾಗಿರಬೇಕೆಂದು ಆಜ್ಞೆ ಮಾಡಿದರು.
ಎಂಪೆರುಮಾನಾರ್ ಕೂರತ್ತಾೞ್ವಾನ್ ಅವರಿಗೆ ಪರಾಶರ ಭಟ್ಟರನ್ನು ಪೆರಿಯ ಪೆರುಮಾಳ್ ಗೆ ದತ್ತು ಪುತ್ರರಾಗಿ ಕೊಡಬೇಕೆಂದು ಆಜ್ಞೆ ಮಾಡಿದರು . ಆೞ್ವಾನ್ ಹಾಗೆಯೆ ಮಾಡಿದರು . ಭಟ್ಟರನ್ನು ಕಿರು ವಯಸ್ಸಿನಿಂದಲೇ ಶ್ರೀರಂಗ ನಾಚ್ಚಿಯಾರ್ ಅವರು ಸಹ ತನ್ನ ಸನ್ನಿಧಿಯಲ್ಲೆ ನೋಡಿ ಕೊಂಡರು .
ಭಟ್ಟರ್ ಅವರು ಕಿರು ಪ್ರಾಯದಲ್ಲೇ ಒಮ್ಮೆ ಪೆರಿಯ ಕೋಯಿಲ್ ಗೆ ಮಂಗಳಾಶಾಸನಂ ಮಾಡಲು ಬಂದರು . ಭಟ್ಟರ್ ಪೆರಿಯ ಪೆರುಮಾಳನ್ನು ಉಪಾಸನೆ ಮಾಡಿಕೊಂಡು ಹೊರಗೆ ಬರುವಾಗ, ಎಂಪೆರುಮಾನಾರ್ ಅನಂತಾೞ್ವಾನ್ ಮತ್ತು ಇತರ ಶ್ರೀವೈಷ್ಣವರಿಗೆ , ತಮ್ಮನ್ನು ಹೇಗೆ ನಡೆಸುತ್ತಾರೋ ಹಾಗೆಯೇ ಭಟ್ಟರನ್ನು ನಡೆಸಬೇಕೆಂದು ಹೇಳುತ್ತಾರೆ .
ಭಟ್ಟರ್ ಚಿಕ್ಕ ವಯಸ್ಸಿನಿಂದಲೇ ಅತಿ ಬುದ್ದಿವಂತನಾಗಿದ್ದರು . ಇದನ್ನು ಸಾಬೀತು ಮಾಡಲು ಹಲವಾರು ಘಟನೆಗಳನ್ನು ನೋಡಬಹುದು
- ಒಂದು ಸಲ ಭಟ್ಟರ್ ಬೀದಿಯಲ್ಲಿ ಆಟ ಆಡುತ್ತಿರುವಾಗ , ಆ ಬೀದಿಯಲ್ಲಿ ಸರ್ವಜ್ಞ ಭಟ್ಟನ್ ಎನ್ನುವ ವಿದ್ವಾನ್ ಪಲಕ್ಕಿಯಲ್ಲಿ ಹೋಗುತ್ತಿದ್ದರು. ಭಟ್ಟರ್ ಶ್ರೀರಂಗಂನಲ್ಲಿ ಪಲಕ್ಕಿಯಲ್ಲಿ ಯಾರನ್ನೋ ಕರೆದುಕೊಂಡು ಹೋಗುವುದನ್ನು ನೋಡಿ ಗಾಭರಿಯಾಗಿ ಅವರ ಎದುರಿಗೆ ಹೋಗಿ ವಿವಾದಕ್ಕೆ ಸವಾಲು ಇಟ್ಟರು. ಸರ್ವಜ್ಞ ಭಟ್ಟನ್ ಭಟ್ಟರನ್ನು ಚಿಕ್ಕ ಮಗು ಎಂದು ಭಾವಿಸಿ , ಭಟ್ಟರನ್ನು ನೋಡಿ ಯಾವ ಪ್ರೆಶ್ನೆಯನ್ನು ಕೇಳಬಹುದು ಅದಕ್ಕೆ ಅವರು ಉತ್ತರ ಕೊಡುವೆ ಎಂದರು. ಭಟ್ಟರ್ ಒಂದು ಮುಷ್ಠಿ ಹಿಡಿ ಮಣ್ಣು ಕೈಯಲ್ಲಿ ಹಿಡಿದು , ತನ್ನ ಕೈಯಲ್ಲಿ ಎಷ್ಟು ಮಣ್ಣು ಇದೆ ಎಂದು ಕೇಳಿದರು . ಸರ್ವಜ್ಞ ಭಟ್ಟನ್ ತನಗೆ ಗೊತ್ತಿಲ್ಲ ಎಂದು ಹೇಳಿ ಮೂಕನಾದರೂ. ಅದಕ್ಕೆ ಭಟ್ಟರ್ “ಒಂದು ಕೈಹಿಡಿ ” ಎಂದು ಉತ್ತರ ಹೇಳಬಹುದಾಗಿತ್ತು ಎಂದರು . ಭಟ್ಟರ್ ರ ಪ್ರತಿಭೆಯನ್ನು ಕಂಡು ಆಶ್ಚರ್ಯಚಕಿತನಾದನು . ತಕ್ಷಣ ಸರ್ವಜ್ಞ ಭಟ್ಟನ್ ಪಲಕ್ಕಿಯಿಂದ ಇಳಿದು ಭಟ್ಟರನ್ನು ವೈಭವೀಕರಿಸಲು ಅವರನ್ನು ಹೊತ್ತುಕೊಂಡು ಅವರ ತಂದೆ ತಾಯಿಯ ಬಳಿ ಹೋದರು .
- ಒಮ್ಮೆ ಭಟ್ಟರ್ ಗುರುಕುಲದಲ್ಲಿ ಇರುವಾಗ , ಭಟ್ಟರ್ ಬೀದಿಯಲ್ಲಿ ಆಟ ಆಡುತ್ತಿದ್ದರು . ಅದನ್ನು ನೋಡಿದ ಆೞ್ವಾನ್ ಭಟ್ಟರನ್ನು ಗುರುಕುಲಕ್ಕೆ ಹೋಗದೆ ಬೀದಿಯಲ್ಲಿ ಆಟ ಆಡುವುದಕ್ಕೆ ಕಾರಣ ಕೇಳಿದರು . ಅದಕ್ಕೆ ಭಟ್ಟರ್ ಉತ್ತರಿಸಿದರು “ಹೇಳಿದ ಸಂದೈಯನ್ನೇ ಪುನಃ ಪುನಃ ಹೇಳಿಕೊಡುತ್ತಿದ್ದಾರೆ(ಸಾಮಾನ್ಯವಾಗಿ ೧೫ ದಿವಸಗಳು ಪುನಾರಾವರ್ತಿಸುವರು) ಎಂದರು”. ಆದರೆ ಭಟ್ಟರ್ ಪಾಶುರಮ್ ಹೇಳಿಕೊಟ್ಟ ಕೂಡಲೇ ಅದನ್ನು ಗ್ರಹಿಸ ಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದರು . ಆೞ್ವಾನ್ ಭಟ್ಟರನ್ನು ಪರೀಕ್ಷಿಸಲು ಒಂದು ಪಾಶುರವನ್ನು ವಾಚಿಸಲು ಹೇಳುತ್ತಾರೆ , ಭಟ್ಟರ್ ಆ ಪಾಶುರವನ್ನು ಬಹಳ ಸುಲಭವಾಗಿ ಪಠಿಸುತ್ತಾರೆ .
- ಒಂದು ಸಲ ಆೞ್ವಾನ್ ತಿರುವಾಯ್ಮೊೞಿ ನಲ್ಲಿ ಬರುವ ನೆಡುಮಾರ್ಕ್ಕಡಿಮೈ ಪದಿಗಮ್ ಹೇಳಿ ಕೊಡುತ್ತಿರುವಾಗ , “ಸಿರುಮಾ ಮಣಿಸರ” ಎನ್ನುವ ಪದ ಬಂದಾಗ , ಭಟ್ಟರ್ ಕೇಳುತ್ತಾರೆ “ಇದು ವಿರೋಧಾತ್ಮಕವಾಗಿದೆ , ಹೇಗೆ ಒಂದೇ ಮನುಷ್ಯ ಚಿಕ್ಕವನಾಗು ದೊಡ್ಡವನಾಗು ಇರಬಹುದು ” ಎಂದು. ಅದಕ್ಕೆ ಆೞ್ವಾನ್ ಸ್ಪಷ್ಟಪಡಿಸದರು- ಹೇಗೆ ಮುದಲಿಯಾಂಡಾನ್ ಅರುಳಾಲಪೆರುಮಾಳ್ ಎಂಪೆರುಮಾನಾರ್ ಮತ್ತು ಇತರ ಶ್ರೀ ವೈಷ್ಣವರು ದೈಹಿಕವಾಗಿ ಚಿಕ್ಕವರಾಗಿ ಇರಬಹುದು ಆದರೆ ಹೃದಯ ಮತ್ತು ಬುದ್ಧಿವಂತಿಕೆಯಲ್ಲಿ ಬಹಳ ದೊಡ್ಡವರಾಗಿದ್ದರು .ಭಟ್ಟರ್ ತಾರ್ಕಿಕ ಉತ್ತರದಿಂದ ತೃಪ್ತಿ ಹೊಂದಿದರು .
ಭಟ್ಟರ್ ಬೆಳೆದ ನಂತರ ಸಂಪ್ರದಾಯದ ದರ್ಶನ ಪ್ರವರ್ತಕರಾದರು .
ಭಟ್ಟರ್ ಅನೇಕ ವಿಶೇಷ ಗುಣಗಳನ್ನು ಹೊಂದಿದ್ದರು. ಉದಾಹರಣೆಗೆ ನಮ್ರತೆ, ವಿಧೇಯತೆ, ಉದಾರ ಮನಸ್ಸಿನ ಗುಣ, ದೊಡ್ಡತನ ಮುಂತಾದುವುಗಳು. ಅವರು ಅರುಳಿಚೆಯಲ್ ಅರ್ಥಗಳಿಗೆ ಬಹಳ ರಸಿಕರಾಗಿದ್ದರು. ಹಲವು ವ್ಯಾಖ್ಯಾನಗಳಲ್ಲಿ ನಂಪಿಳ್ಳೈ ಮತ್ತು ಇತರ ಆಚಾರ್ಯರು ಭಟ್ಟರ ಅಭಿಪ್ರಾಯವೇ ಅತಿ ಸಮಂಜಸವೆಂದು ಮನಗಂಡಿದ್ದರು.
ಆೞ್ವಾನರ ರೀತಿಯಲ್ಲೇ ಭಟ್ಟರೂ ತಿರುವಾಯ್ಮೊೞಿಯಲ್ಲಿ ಮತ್ತು ಅದರ ಅರ್ಥಗಳಲ್ಲಿ ಸಂಪೂರ್ಣವಾಗಿ ಲೀನವಾಗಿದ್ದರು. ಆಗ ಹಲವು ಪ್ರಕರಣಗಳು ನಡೆದಿವೆ ಎಂದು ವ್ಯಾಖ್ಯಾನದಲ್ಲಿ ತೋರಿಸುತ್ತಾರೆ. ಹಲವು ಸಾರಿ ಆೞ್ವಾರರು ತಾನೇ ಪರಾಂಕುಶ ನಾಯಕಿಯಾಗಿ ಭಾವಿಸಿ ಹಾಡುತ್ತಾರೆ. ಆಗ ಭಟ್ಟರ್ ಹೇಳುತ್ತಾರೆ, ‘ಆೞ್ವಾರ್ನ ತಲೆಯಲ್ಲಿ ಈಗ ಏನು ನಡೆಯುತ್ತಿದೆಯೆಂದು ಯಾರಿಗೂ ಹೇಳಲಾಗುವುದಿಲ್ಲ.’ ಎಂದು.
ಹಲವು ಪ್ರಕರಣಗಳು ಭಟ್ಟರ ನಮ್ರತೆ, ದೊಡ್ಡತನ, ಬುದ್ಧಿವಂತಿಕೆಯನ್ನು ಎತ್ತಿ ಹಿಡಿಯುತ್ತವೆ. ಭಟ್ಟರ ನಮ್ರತೆಯನ್ನು ಮಣವಾಳ ಮಾಮುನಿಗಳು ತಮ್ಮ ಯತಿರಾಜ ವಿಂಶತಿಯಲ್ಲಿ ಆಳವಂದಾರರ ಮತ್ತು ಆೞ್ವಾನರ ನಮ್ರತೆಗೆ ಹೋಲಿಸಿ ಬರೆದಿದ್ದಾರೆ. ಈ ವ್ಯಾಖ್ಯಾನವು ಭಟ್ಟರ್ ಮೇಲಿನ ಐದಿಹ್ಯಮ್ (ಪ್ರಕರಣಗಳು) ಮತ್ತು ನಿರ್ವಾಹಮ್ಗಳನ್ನು (ಸೂಚನೆಗಳು/ಮುಡಿವುಗಳು) ಪೂರಾ ಹೊಂದಿವೆ.
- ಅವರ ಶ್ರೀರಂಗರಾಜ ಸ್ತೋತ್ರಮ್ನಲ್ಲಿ , ಅವರು ಒಂದು ಪ್ರಕರಣವನ್ನು ತಿಳಿಸುತ್ತಾರೆ. ಒಂದು ದಿನ ಒಂದು ನಾಯಿಯು ಪೆರಿಯ ಕೋಯಿಲ್ ಒಳಗೆ ಪ್ರವೇಶಿಸಿಬಿಡುತ್ತದೆ. ಅರ್ಚಕರು ಲಗು ಸಂಪ್ರೋಕ್ಷಣೆಯನ್ನು ಮಾಡಲು ನಿರ್ಧರಿಸುತ್ತಾರೆ. ಇದನ್ನು ಕೇಳಿದ ಭಟ್ಟರ್ ಪೆರಿಯ ಪೆರುಮಾಳಿನ ಹತ್ತಿರ ಹೋಗಿ ಹೇಳುತ್ತಾರೆ. ಪ್ರತಿದಿನ ನಾನು ಈ ದೇವಾಲಯದೊಳಗೆ ಬರುತ್ತೇನೆ. ಆದರೆ ಯಾವ ರೀತಿಯ ಸಂಪ್ರೋಕ್ಷಣೆಯನ್ನೂ ಮಾಡುವುದಿಲ್ಲ , ಆದರೆ ಒಂದು ನಾಯಿಯು ಪ್ರವೇಶಿಸಿದಾಗ ಮಾತ್ರ ಏಕೆ ಸಂಪ್ರೋಕ್ಷಣೆಯನ್ನು ಮಾಡುತ್ತಾರೆ ಎಂದು. ಅವರ ವಿನಮ್ರತೆ ಅಂತಹುದು. ಅಂತಹ ಶ್ರೇಷ್ಠ ವಿದ್ವಾಂಸರಾಗಿದ್ದರೂ ಕೂಡಾ , ಅವರು ತಮ್ಮನ್ನು ತಾವು ಒಂದು ನಾಯಿಗಿಂತಾ ಕಡಿಮೆಯಾಗಿ ಭಾವಿಸುತ್ತಿದ್ದರು.
- ಇದೇ ಶ್ರೀರಂಗರಾಜ ಸ್ತೋತ್ರಮ್ನಲ್ಲಿ ಅವರು ಹೇಳುತ್ತಾರೆ. ಭಟ್ಟರು ತಾವು ಶ್ರೀರಂಗದಲ್ಲಿ ಒಂದು ಬೀದಿನಾಯಿಯಾಗಿ ಜನಿಸಿದರೆ ಅದು ದೇವಲೋಕದಲ್ಲಿ ದೇವನಾಗಿ ಜನಿಸಿದ್ದಕ್ಕಿಂತಾ ಮೇಲು ಎಂದು ಹೇಳುತ್ತಾರೆ.
- ನಂಪೆರುಮಾಳರ ಮುಂದೆ ಕೆಲವು ಕೈಂಕರ್ಯಪರರು ಭಟ್ಟರು ಇರುವುದನ್ನು ಗಮನಿಸದೆ ಅವರನ್ನು ಅಸೂಯೆಯಿಂದ ಬೈಯಲು ಶುರುಮಾಡುತ್ತಾರೆ. ಇದನ್ನು ಕೇಳಿದ ಭಟ್ಟರು ತಮ್ಮ ವೈಭವಯುತವಾದ ಆಭರಣಗಳನ್ನೂ ಮತ್ತು ಶಾಲನ್ನೂ ಅವರಿಗೆ ಕೊಡುತ್ತಾರೆ. ಮತ್ತು ಅವರಿಗೆ ಧನ್ಯವಾದಗಳನ್ನು ಹೇಳುತ್ತಾರೆ. “ಎಲ್ಲಾ ಶ್ರೀವೈಷ್ಣವರು ಎರಡು ಕೆಲಸಗಳನ್ನು ಮಾಡಬೇಕು. ಎಂಪೆರುಮಾನರ ವೈಭವವನ್ನು ಹೊಗಳಿ ಹಾಡಬೇಕು. ಮತ್ತು ತಮ್ಮಲ್ಲಿರುವ ನ್ಯೂನ್ಯತೆಗಳನ್ನು ಗೋಳು ಹೊಯ್ದು ಕೊಳ್ಳಬೇಕು. ನಾನು ಎಂಪೆರುಮಾನರ ವೈಭವವನ್ನು ಹಾಡಿ ಹೊಗಳುವುದಲ್ಲಿ ಮುಳುಗಿ ಹೋಗಿ ನನ್ನ ಕುಂದು ಕೊರತೆಗಳನ್ನು ಹೇಳಿಕೊಳ್ಳುವುದನ್ನು ಮರೆತುಬಿಟ್ಟೆ. ಈಗ ನೀವು ನನ್ನ ಕರ್ತವ್ಯವನ್ನು ಮಾಡಿ ನನಗೆ ಮಹಾ ಉಪಕಾರವನ್ನು ಮಾಡಿದ್ದೀರಿ. ಆದ್ದರಿಂದ ನಾನು ನಿಮ್ಮನ್ನು ಸನ್ಮಾನಿಸುತ್ತೇನೆ ಎಂದು ಹೇಳಿದರು. ಅಂತಹುದು ಭಟ್ಟರ ದೊಡ್ಡತನ.
- ಭಟ್ಟರ ಕಾಲಕ್ಷೇಪ ಗೋಷ್ಠಿಯನ್ನು ಬಹಳ ಶ್ರೀವೈಷ್ಣವರು ಕೇಳುತ್ತಿದ್ದರು. ಒಂದು ದಿನ ಭಟ್ಟರ್ ಶಾಸ್ತ್ರವನ್ನು ಕಲಿಯದ ಒಬ್ಬ ಶ್ರೀವೈಷ್ಣವನಿಗಾಗಿ ಕಾಯುತ್ತಿರುತ್ತಾರೆ. ಗೋಷ್ಠಿಯಲ್ಲಿರುವ ಬೇರೆ ವಿದ್ವಾಂಸರು ಕೇಳುತ್ತಾರೆ ಅವರಿಗಾಗಿ ಏಕೆ ಕಾಯುತ್ತಿದ್ದೀರಾ? ಎಂದು. ಆಗ ಭಟ್ಟರ್ ಹೇಳುತ್ತಾರೆ ಅವರು ವಿದ್ವಾನ್ ಅಲ್ಲದಿರಬಹುದು. ಆದರೆ ಅವರಿಗೆ ಸರಿಯಾದ ಸತ್ಯವೊಂದು ತಿಳಿದಿದೆ ಎಂದು. ಅದನ್ನು ಸಮರ್ಥಿಸಲು ಒಬ್ಬ ವಿದ್ವಾನರನ್ನು ಕರೆದು ‘ಉಪಾಯವೇನು?’ ಎಂದು ಕೇಳಿದಾಗ ಆ ಪಂಡಿತನು ಉತ್ತರಿಸುತ್ತಾರೆ ‘ಶಾಸ್ತ್ರದಲ್ಲಿ ಅನೇಕ ಉಪಾಯಗಳನ್ನು ಹೇಳಿದ್ದಾರೆ. ಕರ್ಮ, ಜ್ಞಾನ, ಭಕ್ತಿಯೋಗ ಮುಂತಾದುವುಗಳು’ ಎಂದು. ಆಮೇಲೆ ಭಟ್ಟರ್ ಇನ್ನೊಬ್ಬರು ಪಂಡಿತರನ್ನು ಕೇಳುತ್ತಾರೆ ‘ಯಾವುದು ಉಪೇಯಮ್?’ ಎಂದು. ಅದಕ್ಕೆ ಆ ಪಂಡಿತರು ‘ಎಷ್ಟೊಂದು ಗುರಿಗಳಿವೆ , ಐಶ್ವರ್ಯ, ಕೈವಲ್ಯ, ಕೈಂಕರ್ಯ, ಮುಂತಾದುವುಗಳು ‘ ಎಂದು. ಭಟ್ಟರು ಆಗ ಹೇಳುತ್ತಾರೆ. ‘ನೀವು ವಿದ್ವಾಂಸರಾದರೂ ಮನಃ ಶುದ್ಧಿಯಿಲ್ಲ’ ಎಂದು. ಆಗ ಅವರು ಕಾಯುತ್ತಿದ್ದ ಆ ಶ್ರೀವೈಷ್ಣವರು ಬರುತ್ತಾರೆ. ಆಗ ಭಟ್ಟರ್ ಅದೇ ಪ್ರಶ್ನೆಯನ್ನು ಅವರಲ್ಲೂ ಕೇಳುತ್ತಾರೆ. ಅದಕ್ಕೆ ಆ ಸ್ವಾಮಿಯು ಉತ್ತರಿಸುತ್ತಾರೆ. ‘ಎಂಪೆರುಮಾನರೇ ಉಪಾಯಮ್ ಮತ್ತು ಉಪೇಯಮ್ ‘ಎಂದು. ಅದಕ್ಕೆ ಭಟ್ಟರ್ ಹೇಳುತ್ತಾರೆ. ‘ಇದೇ ಸರಿಯಾದ ಶ್ರೀವೈಷ್ಣವನ ನಿಷ್ಠೆ. ಆದುದರಿಂದಲೇ ನಾನು ಈ ಸ್ವಾಮಿಗಾಗಿ ಕಾಯುತ್ತಿದ್ದೆ.’ ಎಂದು.
- ಸೋಮಾಸಿಯಾಂಡಾನ್ರವರು ತಿರುವಾರಾಧನೆಯ ಕ್ರಮವನ್ನು ಭಟ್ಟರಲ್ಲಿ ಕೇಳಿದಾಗ, ಭಟ್ಟರ್ ಅವರಿಗೆ ವಿವರಣೆಯನ್ನು ಬಹಳ ವಿಸ್ತಾರವಾಗಿ ಕೊಡುತ್ತಾರೆ. ಒಂದು ಸಾರಿ ಸೋಮಾಸಿಯಾಂಡಾನರು ಭಟ್ಟರನ್ನು ಕಾಣಲು ಬಂದಾಗ , ಭಟ್ಟರ್ ಪ್ರಸಾದವನ್ನು ಸ್ವೀಕರಿಸಲು ಮುಂದಾಗುತ್ತಿರುತ್ತಾರೆ. ಆಗ ಅವರು ತಕ್ಷಣ ತಾವು ತಿರುವಾರಾಧನೆಯನ್ನು ಮಾಡಲಿಲ್ಲ ಎಂದು ಜ್ಞಾಪಿಸಿಕೊಳ್ಳುತ್ತಾರೆ. ಅವರು ತಾವು ತಿರುವಾರಾಧನೆಯನ್ನು ಮಾಡುವ ಪೆರುಮಾಳನ್ನು ತಕ್ಷಣ ತರಬೇಕೆಂದು ಆಜ್ಞಾಪಿಸಿ, ಆ ಪೆರುಮಾಳಿಗೆ ತಯಾರಿಸಿದ ಭಕ್ಷಣೆಗಳನ್ನು ಸಮರ್ಪಿಸಿ, ತಾವು ತಕ್ಷಣವೇ ತಿನ್ನಲು ಆರಂಭಿಸುತ್ತಾರೆ. ಇದನ್ನು ಕಂಡ ಸೋಮಾಸಿಯಾಂಡಾನರು ತಮಗೆ ಮಾತ್ರ ಏಕೆ ವಿಸ್ತಾರವಾದ ತಿರುವಾರಾಧನೆ ಕ್ರಮ ಎಂದು ಕೇಳಿದಾಗ, ಭಟ್ಟರ್ ಹೇಳುತ್ತಾರೆ, ಚಿಕ್ಕದಾದ ತಿರುವಾರಾಧನೆಯೇ ತಮಗೆ ಜಾಸ್ತಿಯಾಗುತ್ತದೆ. ಏಕೆಂದರೆ ತಾವು ತಿರುವಾರಾಧನೆಯನ್ನು ಪ್ರಾರಂಭಿಸಿದಾಗ ಅತೀ ಹರ್ಷ ಭಾವ ಪರವಶರಾಗಿ ಮೂರ್ಛೆ ಹೋಗುತ್ತಾರೆ. ಆದರೆ ಸೋಮಾಸಿಯಾಂಡಾನರಿಗೆ ದೊಡ್ಡ ತಿರುವಾರಾಧನೆಯೂ ಸಾಕಾಗುವುದಿಲ್ಲ. ಏಕೆಂದರೆ ಅವರು ಸೋಮಯಾಗವೆಂಬ ದೊಡ್ಡ ಯಾಗವನ್ನು ಮಾಡುತ್ತಿದ್ದರಿಂದ ಚಿಕ್ಕದೆಲ್ಲಾ ಅವರಿಗೆ ತೃಪ್ತಿಯಾಗುವುದಿಲ್ಲ ಎಂದು ಹೇಳುತ್ತಾರೆ.
- ಒಂದು ದಿನ ಶ್ರೀರಂಗಮ್ನಲ್ಲಿ ಊರಿಯಾಡಿ ಪುರಪ್ಪಾಡು ನಡೆಯುತ್ತಿದ್ದಾಗ, ಭಟ್ಟರ್ ವೇದ ಪಾರಾಯಣ ಗೋಷ್ಠಿಯನ್ನು ಬಿಟ್ಟು ಇಡಯರ್ (ಹಸುಮೇಯಿಸುವವರ) ಗೋಷ್ಠಿಯನ್ನು ಸೇರಿಕೊಂಡರು. ಅವರನ್ನು ಕೇಳಿದಾಗ , ಎಂಪೆರುಮಾನರ ಕಟಾಕ್ಷವು ಇಡಯರ್ ಮೇಲೆ ಸಂಪೂರ್ಣವಾಗಿ ಆ ದಿನದಲ್ಲಿ ಇರುತ್ತದೆ. ಈ ಪುರಪ್ಪಾಡು ಅವರಿಗಾಗಿ ಇದೆ ಎಂದು ಮತ್ತು ನಾವು ಎಲ್ಲಿ ಎಂಪೆರುಮಾನರ ಕಟಾಕ್ಷವಿದೆಯೋ ಅಲ್ಲಿರಬೇಕೆಂದು ಹೇಳುತ್ತಾರೆ.
- ಒಂದು ದಿನ ಅನಂತಾೞ್ವಾನರು ಭಟ್ಟರನ್ನು ಕೇಳುತ್ತಾರೆ, “ಪರಮಪದನಾಥನಿಗೆ ಎರಡು ಕೈಗಳೇ, ಇಲ್ಲ ನಾಲ್ಕು ಕೈಗಳಿವೆಯೋ ಎಂದು. ಭಟ್ಟರ್ ಹೇಳುತ್ತಾರೆ. ಯಾವುದಾದರೂ ಇರಬಹುದು. ಅವರಿಗೆ ಎರಡು ಕೈಗಳಿದ್ದರೆ ಅವರು ಪೆರಿಯ ಪೆರುಮಾಳ್ ಎಂದು, ನಾಲ್ಕು ಕೈಗಳಿದ್ದರೆ ಅವರು ನಂಪೆರುಮಾಳ್ ಎಂದು.
- ಅಮ್ಮಣಿ ಆೞ್ವಾನರು ತಾವು ಬಹಳ ದೂರದಿಂದ ಬಂದಿರುವುದಾಗಿಯೂ ಭಟ್ಟರನ್ನು ಕೆಲವು ಉತ್ತಮವಾದ ಸಲಹೆಗಳನ್ನು ಕೊಡಬೇಕೆಂದು ಹೇಳುತ್ತಾರೆ. ಭಟ್ಟರು ನೆಡುಮಾರ್ಕಡಿಮೈ ಪದಿಗೆಯನ್ನು ತಿರುವಾಯ್ಮೊೞಿಯಿಂದ ಆರಿಸಿ ಹೇಳುತ್ತಾರೆ. ಎಂಪೆರುಮಾನರನ್ನು ತಿಳಿದುಕೊಳ್ಳುವುದು ಎಂದರೆ ಸ್ವಲ್ಪವೇ ತಿನ್ನುವುದು ಎಂದು. ಭಾಗವತವನ್ನು ತಿಳಿದುಕೊಳ್ಳುವುದು ಎಂದರೆ ಪೂರ್ತಿ ಹೊಟ್ಟೆ ತುಂಬಾ ತಿನ್ನುವುದು ಎಂದು ಅರ್ಥ ಎಂದು ಹೇಳುತ್ತಾರೆ.
- ಒಂದು ದಿನ ಒಬ್ಬ ರಾಜ ಭಟ್ಟರ್ನ ವಿಶೇಷತೆಯನ್ನೂ ಅವರ ಜನಪ್ರಿಯತೆಯನ್ನೂ ಕೇಳಿ ಭಟ್ಟರನ್ನು ಬಂದು ಕಾಣಲು ಮತ್ತು ಆರ್ಥಿಕ ಸಹಾಯವನ್ನು ಪಡೆಯಲು ಕರೆಯುತ್ತಾರೆ. ಅದಕ್ಕೆ ಭಟ್ಟರು ಹೇಳುತ್ತಾರೆ ನಂಪೆರುಮಾಳರೇ ಅವರ ಅಭಯ ಹಸ್ತವನ್ನು ಇನ್ನೊಂದು ಪಕ್ಕಕ್ಕೆ ತಿರುಗಿಸಿದರೂ, ನಾನು ಯಾರ ಸಹಾಯಕ್ಕೂ ಕೈಚಾಚುವುದಿಲ್ಲ ಎಂದು.
- ಒಂದು ದಿನ ಅಮುದನಾರ್ ತಮ್ಮನ್ನು ತಾವು ಭಟ್ಟರಿಗಿಂತಾ ಹೆಚ್ಚು, ಆೞ್ವಾನರ ಜೊತೆ ತಮಗಿರುವ ಆಚಾರ್ಯ-ಶಿಷ್ಯ ಸಂಬಂಧವೇ ಹೆಚ್ಚು. ಭಟ್ಟರೊಡಗಿನ ತಂದೆ-ಮಗನ ಸಂಬಂಧಕ್ಕಿಂತಾ ಎಂದು ಹೇಳಿದಾಗ ಭಟ್ಟರ್ ಹೇಳುತ್ತಾರೆ “ಅವರು ಹೇಳಿದ್ದು ಸರಿಯೇ, ಆದರೆ ಅದನ್ನು ಅವರೇ ಹೇಳಿಕೊಳ್ಳುವುದುದಕ್ಕಿಂತಾ ಬೇರೆಯವರು ಹೇಳಿದ್ದರೆ ಹೆಚ್ಚು ಸಮಂಜಸ “ ಎಂದು ಹೇಳುತ್ತಾರೆ.
- ಯಾರೋ ಒಬ್ಬರು ಭಟ್ಟರನ್ನು ಕೇಳುತ್ತಾರೆ. “ಶ್ರೀವೈಷ್ಣವರು ದೇವತಾಂತರದವರ ಜೊತೆ ಹೇಗೆ ವ್ಯವಹರಿಸಬೇಕು? “ಎಂದು. ಭಟ್ಟರ್ ಅದಕ್ಕೆ ಹೇಳುತ್ತಾರೆ “ಈ ಪ್ರಶ್ನೆಯೇ ತಪ್ಪು . ಏಕೆಂದರೆ ದೇವತಾಂತರದವರಲ್ಲಿ ರಜೋ, ತಮೋ ಗುಣಗಳು ಬಹಳಷ್ಟಿರುತ್ತವೆ. ಆದರೆ ಶ್ರೀವೈಷ್ಣವರಲ್ಲಿ ಬರೀ ಸತ್ತ್ವ ಗುಣವಿರುತ್ತವೆ. ಆದ್ದರಿಂದ ದೇವತಾಂತರದವರು ಶ್ರೀವೈಷ್ಣವರಿಗೆ ಸೇವಕರಾಗಿರಬೇಕು. ಅದೇ ಸಹಜವಾದ ಗುಣ. (ಈ ಐದಿಹ್ಯವು ಆೞ್ವಾನರ ಬಗ್ಗೆಯೂ ವಿವರಿಸಲಾಗುತ್ತದೆ.)
- ಭಟ್ಟರ ಜನಪ್ರಿಯತೆಯು ಸೀಮೆಯಿಲ್ಲದ್ದು. ಅವರ ತಾಯಿಯೇ (ಸ್ವತಃ ವಿದ್ವಾನರಾಗಿದ್ದಾರೂ) ಅವರ ಮಗನ ಶ್ರೀಪಾದ ತೀರ್ಥವನ್ನು ತೆಗೆದುಕೊಳ್ಳುತ್ತಿದ್ದರು. ಅವರನ್ನು ಏಕೆಂದು ಕೇಳಿದಾಗ , ಅವರು ಒಬ್ಬ ಶಿಲ್ಪಿಯು ತಾನೇ ಶಿಲ್ಪವನ್ನು ನಿರ್ಮಿಸಿದ್ದರೂ, ಅದನ್ನು ಎಂಪೆರುಮಾನರಾಗಿ ಪೂಜಿಸಬಾರದೆಂದೇನೂ ಇಲ್ಲ. ಅದರಂತೆಯೇ ನನ್ನಲ್ಲಿ ನನ್ನ ಮಗ ಹುಟ್ಟಿರಬಹುದು. ಅವರು ಶ್ರೇಷ್ಠವಾದವರು ಪೂಜಿಸಿದರೆ ತಪ್ಪೇನೂ ಇಲ್ಲ ಎಂದು ಹೇಳುತ್ತಾರೆ.
- ಒಂದು ದಿನ ಒಬ್ಬ ದೇವತಾಂತರಪರರ ಧೋತಿಯು ಭಟ್ಟರನ್ನು ಆಕಸ್ಮಿಕವಾಗಿ ತಗುಲಿಬಿಡುತ್ತದೆ. ಭಟ್ಟರ್ ದೊಡ್ಡ ವಿದ್ವಾಂಸರಾಗಿದ್ದರೂ , ದೇವತಾಂತರಪರರ ಸ್ವಲ್ಪ ತಗುಲಿಕೆಯೂ ಅವರನ್ನು ವಿಚಲಿತರನ್ನಾಗಿ ಮಾಡುತ್ತದೆ. ಅವರು ತಮ್ಮ ತಾಯಿಯವರಲ್ಲಿ ಓಡಿ ಹೋಗಿ ಏನು ಮಾಡುವುದೆಂದು ಕೇಳುತ್ತಾರೆ. ಆಗ ಅವರ ತಾಯಿಯವರು ‘ಒಂದೇ ದಾರಿ, ಅದು ಏನೆಂದರೆ ಅಬ್ರಾಹ್ಮಣ ಶ್ರೀವೈಷ್ಣವರ ಶ್ರೀಪಾದ ತೀರ್ಥವನ್ನು ತೆಗೆದುಕೊಳ್ಳುವುದು” ಎಂದು ಹೇಳುತ್ತಾರೆ. ಭಟ್ಟರ್ ಅಂತಹ ಒಬ್ಬರು ಶ್ರೀವೈಷ್ಣವರನ್ನು ಪತ್ತೆ ಹಚ್ಚುತ್ತಾರೆ. ಮತ್ತು ಅವರನ್ನು ಶ್ರೀಪಾದ ತೀರ್ಥವನ್ನು ಕೊಡುವಂತೆ ಕೇಳಿಕೊಳ್ಳುತ್ತಾರೆ. ಆದರೆ ಆ ಶ್ರೀವೈಷ್ಣವರು ಭಟ್ಟರ ಸ್ಥಾನವನ್ನು ನೋಡಿ, ಶ್ರೀಪಾದ ತೀರ್ಥವನ್ನು ಕೊಡಲು ನಿರಾಕರಿಸುತ್ತಾರೆ. ಆದರೆ ಭಟ್ಟರ್ ಮತ್ತೆ ಮತ್ತೆ ಕೇಳಿ ಪಡೆದುಕೊಳ್ಳುತ್ತಾರೆ.
- ಒಂದು ದಿನ ಭಟ್ಟರ್ ತಿರುವಾಳವೊಟ್ಟ (ಪಂಖ) ಕೈಂಕರ್ಯವನ್ನು ಕಾವೇರಿ ನದೀ ತೀರದ ಮಂಟಪದಲ್ಲಿ ಮಾಡುತ್ತಿರುತ್ತಾರೆ. ಸೂರ್ಯನು ಅಸ್ತಂಗತವಾಗುವ ಸಮಯವಾಗುತ್ತದೆ. ಆದ್ದರಿಂದ ಒಬ್ಬ ಶ್ರೀವೈಷ್ಣವರು ಅವರಿಗೆ ಸಂಧ್ಯಾವಂದನೆಯನ್ನು ಮಾಡುವ ಸಮಯವಾಯಿತು ಎಂದು ಜ್ಞಾಪಿಸುತ್ತಾರೆ. ಭಟ್ಟರ್ ಉತ್ತರಿಸುತ್ತಾರೆ. ಅವರು ಅಂತರಂಗ ಕೈಂಕರ್ಯವನ್ನು ಮಾಡುತ್ತಿರುವುದರಿಂದ ಚಿತ್ರಗುಪ್ತರು (ಯಮನ ಆಪ್ತ ಕೆಲಸಗಾರ) ಇದನ್ನು ಪಾಪವೆಂದು ಪರಿಗಣಿಸುವುದಿಲ್ಲ. ಅೞಗಿಯ ಪೆರುಮಾಳ್ ನಾಯನಾರ್ರವರು ಇದನ್ನು ಆಚಾರ್ಯ ಹೃದಯದಲ್ಲಿ ವಿವರಿಸುತ್ತಾರೆ. (ಅತ್ತಾಣಿ ಚೇವಗತ್ತಿಲ್ ಪೊದುವಾನದು ನೞುವುಮ್). ಇದನ್ನು ಒಂದು ನೆಪವನ್ನಾಗಿ ಇಟ್ಟುಕೊಂಡು ನಿತ್ಯ ಕರ್ಮಗಳನ್ನು ಸೋಮಾರಿತನದಿಂದ ಪೂರೈಸದೇ ಇರಬಾರದು ಎಂದು ಹೇಳಿದ್ದಾರೆ.
- ಒಂದು ದಿನ ಅಧ್ಯಯನ ಉತ್ಸವಮ್ ನಡೆಯುವಾಗ, ಆಂಡಾಳ್ ಅಮ್ಮಂಗಾರ್ ಭಟ್ಟರ್ಗೆ ದ್ವಾದಸಿ ಪಾರಣಮ್ನನ್ನು ನೆನಪಿಸುತ್ತಾರೆ. ಅದಕ್ಕೆ ಭಟ್ಟರ್ ಉತ್ತರಿಸುತ್ತಾರೆ, “ ನಾವು ಪೆರಿಯ ಉತ್ಸವದ ದಿನದಂದು ಏಕಾದಶಿ/ದ್ವಾದಶಿಯನ್ನು ಹೇಗೆ ನೆನಪಿನಲ್ಲಿಟ್ಟುಕೊಳ್ಳುವುದು?” ಎಂದು. ಇದಕ್ಕೆ ಅರ್ಥವೇನೆಂದರೆ ಯಾವಾಗ ಭಗವದ್ ಅನುಭವಮ್ ಉಂಟಾಗುತ್ತದೆಯೋ ನಾವು ಆಗ ಆಹಾರದ ಬಗ್ಗೆ ಚಿಂತಿಸಬಾರದು. (ಇದನ್ನು ಹಲವರು ಅಪಾರ್ಥ ಮಾಡಿಕೊಂಡು, ನಾವು ಏಕಾದಶಿಯಂದು ಉಪವಾಸ ಮಾಡಬಾರದು ಎಂದು ಅರ್ಥ ಮಾಡಿಕೊಳ್ಳುವರು. ಇದು ತಪ್ಪು . ಏಕಾದಶಿ ಮಾಡುವುದು ನಮ್ಮ ಕರ್ತವ್ಯ.
- ಒಂದು ದಿನ ಭಟ್ಟರ್ ತಮ್ಮ ಶಿಷ್ಯರಿಗೆ ಈ ದೇಹದಿಂದಲೂ, ದೇಹಕ್ಕೆ ಮಾಡುವ ಅಲಂಕಾರದಿಂದಲೂ ತಮ್ಮನ್ನು ತಾವು ದೂರವಾಗಿರಬೇಕೆಂದು ಹೇಳುತ್ತಾರೆ. ಆದರೆ ಮರುದಿನವೇ ಅವರು ರೇಷ್ಮೆ ವಸ್ತ್ರಗಳನ್ನೂ, ಆಭರಣಗಳನ್ನೂ ಮುಂತಾದುವುಗಳನ್ನು ಧರಿಸುತ್ತಾರೆ. ಒಬ್ಬ ಶಿಷ್ಯನು ಅವರನ್ನು ಅವರ ಸೂಚನೆಗಳಿಗೂ ಅವರ ರೀತಿಗಳಿಗೂ ವಿರೋಧಾಭಾಸವಿರುವುದನ್ನು ಆ ಶಿಷ್ಯರು ಹೇಳುತ್ತಾರೆ. ಅದಕ್ಕೆ ಭಟ್ಟರ್ ಹೇಳುತ್ತಾರೆ. ತಾವು ತಮ್ಮ ದೇಹವನ್ನು ಎಂಪೆರುಮಾನರ ಕೋಯಿಲ್ ಆೞ್ವಾರ್ ವಾಸಸ್ಥಲಮ್ ಆಗಿ ಕಲ್ಪಿಸುವುದಾಗಿಯೂ, ಆದ್ದರಿಂದ ಎಂಪೆರುಮಾನರು ವಾಸವಿರುವ ಮಂಟಪವನ್ನು ಅಲಂಕರಿಸುವ ಹಾಗೆ, ಎಲ್ಲರೂ ಅಂತಹ ದೃಢ ನಂಬಿಕೆಯನ್ನು (ಅಥವಸಾಯಮ್) ಇಟ್ಟಿದ್ದರೆ, ನಾವು ನಮ್ಮ ದೇಹವನ್ನು ಸುಂದರವಾಗಿ ಅಲಂಕರಿಸಬಹುದು ಎಂದು ಹೇಳುತ್ತಾರೆ.
- ವೀರಸುಂದರ ಬ್ರಹ್ಮ ರಾಯನ್, ಅಲ್ಲಿಗೆ ರಾಜನಾಗಿದ್ದವನು , ಮತ್ತು ಆೞ್ವಾನರ ಶಿಷ್ಯನಾಗಿದ್ದವನು ಒಂದು ಗೋಡೆ ಕಟ್ಟಲು ಯೋಚಿಸುತ್ತಾನೆ. ಆಗ ಪಿಳ್ಳೈ ಆೞ್ವಾನರ ತಿರುಮಾಳಿಗೆಯನ್ನು ನಾಶಪಡಿಸಿ ಆ ಜಾಗದಲ್ಲಿ ಗೋಡೆಯನ್ನು ಕಟ್ಟಲು ಯೋಚಿಸುತ್ತಾನೆ. ಭಟ್ಟರ್ ಹಾಗೆ ಮಾಡದಿರಲು ಸೂಚಿಸುತ್ತಾರೆ . ಆದರೆ ರಾಜನು ಅದನ್ನು ಕೇಳುವುದಿಲ್ಲ. ಭಟ್ಟರ್ ಶ್ರೀರಂಗಮ್ ಅನ್ನು ಬಿಟ್ಟು ತಿರುಕೋಷ್ಠಿಯೂರ್ಗೆ ಹೋಗಿ ಅಲ್ಲಿ ಸ್ವಲ್ಪ ಸಮಯ ಇರುತ್ತಾರೆ. ಅಲ್ಲಿದ್ದಾಗ , ಭಟ್ಟರ್ಗೆ ಶ್ರೀರಂಗನಾಥರಿಂದ ದೂರ ಇರುವುದು ಸಹಿಸಲಾಗುವುದಿಲ್ಲ. ಮತ್ತು ಅವರು ಪೂರ್ತಿಯಾಗಿ ದುಃಖ ಭರಿತರಾಗುತ್ತಾರೆ. ಕೊನೆಯಲ್ಲಿ ರಾಜನು ಸತ್ತ ಬಳಿಕ , ಭಟ್ಟರ್ ಶ್ರೀರಂಗಕ್ಕೆ ವಾಪಸ್ಸು ಬರುತ್ತಾರೆ. ಶ್ರೀರಂಗರಾಜ ಸ್ತವಮ್ನನ್ನು ಶ್ರೀರಂಗಕ್ಕೆ ತಿರುಗಿ ಬರುವ ದಾರಿಯಲ್ಲಿ ರಚಿಸುತ್ತಾರೆ.
- ಒಂದು ಸಾರಿ ಭಟ್ಟರ್ ಒಬ್ಬ ವಿದ್ವಾಂಸನನ್ನು ವಿವಾದದಲ್ಲಿ (ಚರ್ಚೆ) ಸೋಲಿಸುತ್ತಾರೆ. ಅವರನ್ನು ಗೊಂದಲದಲ್ಲಿ ಸಿಕ್ಕಿಸಲು ಒಂದು ಹಾವನ್ನು ಒಂದು ಮಡಿಕೆಯಲ್ಲಿ ಹಾಕಿ, ಈ ಮಡಿಕೆಯಲ್ಲಿ ಏನಿದೆ ಎಂದು ಕೇಳುತ್ತಾರೆ. ಅದರಲ್ಲಿ ಹಾವು ಇರುವುದನ್ನು ಮನಗೊಂಡ ಭಟ್ಟರ್ ಹೇಳುತ್ತಾರೆ. ಇದರಲ್ಲಿ ಕೊಡೆ (ಛತ್ರಿ) ಇದೆ ಎಂದು. ಈ ಉತ್ತರದಿಂದ ವಿದ್ವಾನರು ಗೊಂದಲಗೊಳ್ಳುತ್ತಾರೆ. ಭಟ್ಟರ್ ವಿವರಿಸುತ್ತಾರೆ. ಪೊಯ್ಗೈ ಆೞ್ವಾರರು ಹೇಳಿದ ಪ್ರಕಾರ ಚೆಂಡ್ರಾಯ್ ಕುಡೈಯಾಮ್ – ಆದಿಶೇಷ ಅಂದರೆ ಕೊಡೆಯೂ ಆಗುತ್ತದೆ ಎಂದು ಹೇಳುತ್ತಾರೆ
ಅವರ ಜೀವನದಲ್ಲಿ ಹಲವು ವಿಷಯಗಳು ಮತ್ತೆ ಮತ್ತೆ ಓದಿ ಬಹಳವಾಗಿಯೇ ಸಂತೋಷ ಪಡಬಹುದು. ಪ್ರತಿಸಾರಿ ಓದಿದಾಗ ಹೊಸದಾಗಿ ಅನುಭವ ಪಡೆಯಬಹುದು.
ಭಟ್ಟರ್ ತಾಯಾರಾದ ಶ್ರೀರಂಗ ನಾಚ್ಚಿಯಾರ್ರವರನ್ನು ಬಹಳವೇ ಹಚ್ಚಿಕೊಂಡಿದ್ದರು. ಅವರು ಪೆರಿಯ ಪೆರುಮಾಳಿಗಿಂತಲೂ ಅವರನ್ನು ಹಚ್ಚಿಕೊಂಡಿದ್ದರು. ಒಂದು ದಿನ ನಂಪೆರುಮಾಳರು ನಾಚ್ಚಿಯಾರ್ ತಿರುಕ್ಕೋಲಮ್ನನ್ನು ಮೆಚ್ಚಿಕೊಂಡು , ಭಟ್ಟರನ್ನು ತಾವು ಶ್ರೀರಂಗ ನಾಚ್ಚಿಯಾರ್ ಅವರ ಹಾಗೆ ಇರುವೆನೇ? ಎಂದು ಕೇಳಿದರು. ಭಟ್ಟರ್ ಹೇಳುತ್ತಾರೆ. ‘ಎಲ್ಲವೂ ಸರಿ. ಆದರೆ ಶ್ರೀರಂಗ ನಾಚ್ಚಿಯಾರ್ ಕಣ್ಣಲ್ಲಿ ಕಾಣುವ ಕರುಣೆ ಎಂಪೆರುಮಾನರ ಕಣ್ಣಲ್ಲಿ ಕಾಣುವುದಿಲ್ಲ ಎಂದು ಹೇಳುತ್ತಾರೆ. ಇದು ಹನುಮಂತನು ಶ್ರೀರಾಮನನ್ನೂ, ಸೀತಾಮಾತೆಯನ್ನೂ ಹೋಲಿಕೆ ಮಾಡಿ ಕೊನೆಯಲ್ಲಿ ಸೀತಾಮಾತೆಯು ಅಸಿತೇಕ್ಷಣ (ಸುಂದರವಾದ ಕಣ್ಣುಗಳನ್ನು ಹೊಂದಿರುವವಳು) ಮತ್ತು ಅವರ ಕಣ್ಣುಗಳು ಎಂಪೆರುಮಾನರಾದ ರಾಮರಿಗಿಂತಲೂ ಚೆನ್ನಾಗಿವೆ ಎಂದು ಹೇಳಿದ್ದನ್ನು ನೆನಪು ಮಾಡುತ್ತದೆ. ಶ್ರೀಗುಣ ರತ್ನಕೋಶಮ್ ಎನ್ನುವ ಕೃತಿಯು ಅವರ ಶ್ರೀರಂಗ ನಾಚ್ಚಿಯಾರ್ರವರ ಮೇಲಿರುವ ಕಕ್ಕುಲತೆಯನ್ನು ಪ್ರತಿಬಿಂಬಿಸುತ್ತದೆ.
ಭಟ್ಟರ್ ಅನೇಕ ಪಾಸುರಗಳಿಗೆ ಅದ್ಭುತವಾದ ಅರ್ಥಗಳನ್ನೂ ವರ್ಣನೆಯನ್ನೂ ನೀಡಿದ್ದಾರೆ. ಅದಿಲ್ಲದಿದ್ದರೆ ಪಾಸುರಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರ. ಸ್ವಲ್ಪ ಉದಾಹರಣೆಗಳನ್ನು ನೋಡೋಣ:
- ಪೆರಿಯ ತಿರುಮೊೞಿ 7.1.1 ನಲ್ಲಿ ಕರವಾ ಮಡನಾಗು ಪಾಸುರದಲ್ಲಿ , ಪಿಳ್ಳೈ ಅಮುಧನಾರರು ಆಳ್ವಾರರು ಹಸುವಾಗಿಯೂ, ಎಂಪೆರುಮಾನರನ್ನು ಕರುವಾಗಿಯೂ ವಿವರಿಸುತ್ತಾರೆ. ಹೇಗೆ ಹಸುವು ತನ್ನ ಕರುವಿಗಾಗಿ ಹಂಬಲಿಸುತ್ತದೆಯೋ ಹಾಗೆ ಆೞ್ವಾರರು ಎಂಪೆರುಮಾನರಿಗಾಗಿ ಹಂಬಲಿಸುತ್ತಾರೆ. ಆದರೆ ಭಟ್ಟರ್ ಸ್ವಲ್ಪ ವಿಭಿನ್ನವಾಗಿ ವಿವರಿಸುತ್ತಾರೆ. ಭಟ್ಟರ್ ಹೇಳುತ್ತಾರೆ “ಕರವಾ ಮಡನಾಗು ತಾನ್ ಕನ್ಱು” ಎಂದು ಜೊತೆಯಾಗಿ ಕೂಡಿಸಿ ಹೇಳಬೇಕು. ಅದರ ಅರ್ಥವೇನೆಂದರೆ “ ಕರುವು ಹೇಗೆ ತನ್ನ ತಾಯಿಯಾದ ಹಸುವಿಗಾಗಿ ಹಂಬಲಿಸುತ್ತದೆಯೋ ಹಾಗೆಯೇ ಆೞ್ವಾರರು ಎಂಪೆರುಮಾನರಿಗಾಗಿ ಹಂಬಲಿಸುತ್ತಾರೆ.” ಎಂದು ಭಟ್ಟರ್ ವಿವರಣೆ ನೀಡಿದ್ದಾರೆ.
- ಪೆರಿಯ ತಿರುಮೊೞಿ 4.4.6 ವ್ಯಾಖ್ಯಾನದಲ್ಲಿ , ಆಪ್ಪಾನ್ ತಿರುವೞುಂದೂರ್ ಅರಯರ್ ಮತ್ತು ಇತರ ಶ್ರೀವೈಷ್ಣವರು ಭಟ್ಟರನ್ನು ಈ ಪಾಸುರದ ಅರ್ಥವನ್ನು ಕೇಳಿರುವುದು ಸ್ಪಷ್ಟವಾಗುತ್ತದೆ. ಭಟ್ಟರ್ ಅವರಿಗೆ ಈ ಪಾಸುರವನ್ನು ಪಠಿಸಲು ಹೇಳುತ್ತಾರೆ. ಒಡನೆಯೇ ಆೞ್ವಾರರು ಈ ಪಾಸುರದಲ್ಲಿ ರಾವಣನನ್ನು ಕುರಿತು ಹೇಳಿರುವುದಾಗಿ ಗುರುತಿಸುತ್ತಾರೆ. ಭಟ್ಟರ್ ವಿವರಿಸುತ್ತಾರೆ. ರಾವಣನು (ಮದ ಅಹಂಕಾರದಿಂದ) ಹೇಳುತ್ತಾನೆ. “ನಾನು ಎಲ್ಲಾ ಮೂರು ಲೋಕಗಳಿಗೂ ರಾಜ. ಆದರೆ ಒಬ್ಬ ಸಾಮಾನ್ಯ ಮನುಷ್ಯನು ತನ್ನನ್ನು ಶ್ರೇಷ್ಠ ಯೋಧನೆಂದು ತಿಳಿದು ನನ್ನೊಡನೆ ಯುದ್ಧಕ್ಕೆ ಬರುತ್ತಿದ್ದಾನೆ.” ಎಂದು ಅರ್ಥವನ್ನು ವಿವರಿಸುತ್ತಾರೆ.
ಭಟ್ಟರ ಜೀವನದಲ್ಲಿ ನಡೆದ ಒಂದು ಪ್ರಮುಖಾಂಶವೆಂದರೆ ಅವರು ತಿರುನಾರಾಯಣಪುರಮ್ ನಲ್ಲಿ ವಾದ ವಿವಾದ ಮಾಡಿ, ನಂಜೀಯರ್ ಅವರನ್ನು ನಮ್ಮ ಸಂಪ್ರದಾಯಕ್ಕೆ ಸೇರಿಸಿರುವುದು. ನಂಜೀಯರ್ರವರನ್ನು ತಿದ್ದುಪಡಿ ಮಾಡಿ ನಮ್ಮ ಸಂಪ್ರದಾಯಕ್ಕೆ ಸೇರಿಸುವುದು ಎಂಪೆರುಮಾನರ ದಿವ್ಯ ಆಜ್ಞೆಯಾಗಿತ್ತು. ಭಟ್ಟರ್ ಪಲ್ಲಕ್ಕಿಯಲ್ಲಿ ಕುಳಿತು ವೈಭವವಾಗಿ ಇತರ ಶ್ರೀವೈಷ್ಣವರೊಡನೆ ದಿವ್ಯವಾದ ವಸ್ತ್ರಗಳನ್ನು ಧರಿಸಿ ತಿರುನಾರಾಯಣಪುರದವರೆಗೂ ಮಾಧವಾಚಾರ್ಯರ ಜೊತೆಗೆ (ನಂಜೀಯರ್ ಅವರ ಮೊದಲ ಹೆಸರು) ವಾದ ಪ್ರತಿವಾದ ಮಾಡಲು ಹೋಗುತ್ತಾರೆ. ಆದರೆ ಅವರನ್ನು ನಿಲ್ಲಿಸಿ, ಅವರು ಇಂತಹ ವಿಜೃಂಭಣೆಯಿಂದ ಹೋದರೆ ಮಾಧವಾಚಾರ್ಯರ ಶಿಷ್ಯರು ಅವರನ್ನು ಮಾಧವಾಚಾರ್ಯರೊಂದಿಗೆ ಭೇಟಿಯಾಗಲು ಬಿಡುವುದಿಲ್ಲ ಎಂದು ಸಲಹೆ ಮಾಡುತ್ತಾರೆ. ಆದ್ದರಿಂದ ಅವರು ಒಂದು ಸರಳವಾದ ವಸ್ತ್ರವನ್ನು ಧರಿಸಿ , ಮಾಧವಾಚಾರ್ಯರ ತದಿಯಾರಾಧನೆ ಕೂಟಕ್ಕೆ ಹೋಗುತ್ತಾರೆ. ಅವರು ಅಲ್ಲಿ ಊಟ ಮಾಡದೇ ಕಾದು ಕುಳಿತಿದ್ದಾಗ, ಮಾಧವಾಚಾರ್ಯರು ಅದನ್ನು ಗಮನಿಸಿ, ಅವರ ಬಳಿ ಬಂದು, ಅವರಿಗೆ ಏನು ಬೇಕು ಮತ್ತು ಏಕೆ ಊಟ ಮಾಡಲಿಲ್ಲ ಎಂದು ವಿಚಾರಿಸುತ್ತಾರೆ. ಭಟ್ಟರ್ ಹೇಳುತ್ತಾರೆ. ಅವರ ಜೊತೆ ವಿವಾದ ಮಾಡಬೇಕೆಂದು ಹೇಳುತ್ತಾರೆ. ಮಾಧವಾಚಾರ್ಯರಿಗೆ ಭಟ್ಟರ ಬಗ್ಗೆ ಮೊದಲೇ ತಿಳಿದಿದ್ದು , ಇವರು ಭಟ್ಟರೇ ಎಂದು ಖಚಿತವಾಯಿತು. ( ಬೇರೆ ಯಾರಿಗೂ ಅವರನ್ನು ವಾದಿಸಲು ಧೈರ್ಯವಿಲ್ಲದ್ದರಿಂದ) . ಅವರು ವಾದ ಪ್ರತಿವಾದ ಮಾಡಲು ಒಪ್ಪುತ್ತಾರೆ. ಭಟ್ಟರ್ ಮೊದಲು ಎಂಪೆರುಮಾನರ ಪರತ್ವಮ್ನನ್ನು ಸ್ಥಾಪಿಸಲು ತಿರುನೆಡುಂದಾಂಟಕಮ್ನನ್ನು ಪ್ರಯೋಗಿಸುತ್ತಾರೆ. ನಂತರ ಶಾಸ್ತ್ರದಲ್ಲಿರುವ ಎಲ್ಲಾ ಅರ್ಥಗಳನ್ನು ಹೇಳುತ್ತಾರೆ. ಮಾಧವಾಚಾರ್ಯರು ತಮ್ಮ ಸೋಲನ್ನು ಒಪ್ಪಿಕೊಂಡು ಭಟ್ಟರ ಪಾದಕಮಲಗಳಿಗೆ ಬಿದ್ದು ಅವರನ್ನು ಆಚಾರ್ಯರಾಗಿ ಸ್ವೀಕರಿಸುತ್ತಾರೆ. ಭಟ್ಟರ್ ಅವರಿಗೆ ಅರುಳಿಚೆಯ್ಯಲ್ನನ್ನು ಕಲಿಯಲು ನಿರ್ದಿಷ್ಟ ಸೂಚನೆಗಳನ್ನು ನೀಡಿ , ಅದರ ಜೊತೆಗೆ ಸಂಪ್ರದಾಯದ ಅರ್ಥಗಳನ್ನು ಬೋಧಿಸುತ್ತಾರೆ. ಭಟ್ಟರ್ ಅವರಿಗೆ ವಿದಾಯ ಹೇಳಿ ಅಲ್ಲಿಂದ ಹೊರಟು ಅಧ್ಯಯನ ಉತ್ಸವಮ್ಗೆ ಒಂದು ದಿನ ಮುಂದೆಯೇ ಶ್ರೀರಂಗಕ್ಕೆ ಹೋಗುತ್ತಾರೆ. ಭಟ್ಟರಿಗಾಗಿ ಅಲ್ಲಿ ವಿಜೃಂಭಣೆಯ ಸ್ವಾಗತಕ್ಕೆ ಏರ್ಪಡಿಸಿರುತ್ತಾರೆ. ಭಟ್ಟರ್ ಪೆರಿಯ ಪೆರುಮಾಳಿನ ಹತ್ತಿರ ಹೋಗಿ ಎಲ್ಲವನ್ನೂ ಅವರ ಮುಂದೆ ಹೇಳುತ್ತಾರೆ. ಪೆರಿಯ ಪೆರುಮಾಳ್ ಅತೀವ ಆನಂದಗೊಂಡು ಭಟ್ಟರಿಗೆ ತಿರುನೆಡುಂದಾಂಟಕಮ್ ಪಠಿಸಲು ಆಜ್ಞಾಪಿಸುತ್ತಾರೆ. ಶ್ರೀರಂಗದಲ್ಲಿ ಅಧ್ಯಯನ ಉತ್ಸವವು ತಿರುನೆಡುಂದಾಂಟಕಮ್ ಪಠಣೆಯಿಂದ ಆರಂಭವಾಗುವುದು ಅಲ್ಲಿ ಮಾತ್ರ ಇಂದಿಗೂ ಜಾರಿಯಲ್ಲಿದೆ.
ಭಟ್ಟರ್ ರಹಸ್ಯ ತ್ರಯಮ್ ನನ್ನು ಗ್ರಂಥದಲ್ಲಿ ಮೊದಲ ಬಾರಿಗೆ ದಾಖಲಿಸಿದರು. ಅವರ ಅಷ್ಟ ಶ್ಲೋಕೀ ಒಂದು ಅದ್ಭುತವಾದ ಕೃತಿ. ಅದರಲ್ಲಿ ತಿರುಮಂತ್ರಮ್, ದ್ವಯಮ್ ಮತ್ತು ಚರಮ ಶ್ಲೋಕಗಳನ್ನು ಎಂಟೇ ಶ್ಲೋಕಗಳಲ್ಲಿ ಅತ್ಯಂತ ಸುಂದರವಾಗಿ ವಿವರಿಸಿದ್ದಾರೆ. ಶ್ರೀರಂಗ ಸ್ತವಮ್ ನಲ್ಲಿ ಅವರು ಬಹಳ ಕ್ಲಿಷ್ಟವಾಗಿರುವ ಶಾಸ್ತ್ರಗಳ ಅರ್ಥವನ್ನು ಸರಳವಾದ ಶ್ಲೋಕಗಳಲ್ಲಿ ವಿವರಿಸಿದ್ದಾರೆ. ವಿಷ್ಣು ಸಹಸ್ರನಾಮ ವ್ಯಾಖ್ಯಾನದಲ್ಲಿ , ಅವರು ಒಂದೊಂದು ತಿರುನಾಮವೂ ಎಂಪೆರುಮಾನರ ಒಂದೊಂದು ಗುಣಗಳಿಗೆ ಸಂಬಂಧಿಸಿದ್ದು ಎಂದು ಬಹಳ ಸುಂದರವಾಗಿ ವಿವರಿಸಿದ್ದಾರೆ. ಶ್ರೀ ಗುಣರತ್ನ ಕೋಷಮ್ ಎನ್ನುವ ಕೃತಿ ಶ್ರೀರಂಗ ನಾಚ್ಚಿಯಾರ್ರವರಿಗೆ ಅರ್ಪಿಸಲ್ಪಟ್ಟಿದ್ದು. ಈ ಕೃತಿಗೆ ಬೇರೆ ಯಾವ ಕೃತಿಯೂ ಸರಿಸಾಟಿಯಾಗಲಾರದು.
ನಮ್ಮ ಪೂರ್ವಾಚಾರ್ಯರಿಗೆ ಹೋಲಿಸಿದರೆ ಭಟ್ಟರ್ ಈ ಸಂಸಾರವನ್ನು ಬೇಗನೇ ತ್ಯಜಿಸಿಬಿಟ್ಟರು. (ನಮ್ಮ ಪೂರ್ವಾಚಾರ್ಯರು ನೂರು ವರ್ಷಗಳ ಮೇಲೆ ಬದುಕಿ ಬಾಳಿದವರು). ಭಟ್ಟರು ಇನ್ನೂ ಸ್ವಲ್ಪ ವರ್ಷಗಳು ಬದುಕಿದ್ದರೆ ಇಲ್ಲಿಂದ ಪರಮಪದಕ್ಕೆ ಮೆಟ್ಟಿಲುಗಳನ್ನು ಸೃಷ್ಟಿಸಿರುತ್ತಿದ್ದರು ಎಂಬ ಮಾತು ಖ್ಯಾತಿಯಲ್ಲಿದೆ. ಭಟ್ಟರ್ ನಂಜೀಯರ್ರವರಿಗೆ ತಿರುವಾಯ್ಮೊೞಿಗೆ ವ್ಯಾಖ್ಯಾನವನ್ನು ಬರೆಯಲು ಆಜ್ಞಾಪಿಸುತ್ತಾರೆ. ಅವರು ನಂಜೀಯರ್ ಅವರನ್ನು ತಮ್ಮ ಮುಂದಿನ ಧರಿಸನ ಪ್ರವರ್ತಕರಾಗಿ ನೇಮಿಸುತ್ತಾರೆ.
ಒಂದು ದಿನ ಭಟ್ಟರ್ ಕೆಲವು ಪಾಸುರಗಳನ್ನು ಮತ್ತು ಅದರ ಸಾರಾಂಶಗಳನ್ನು ಪೆರಿಯ ಪೆರುಮಾಳಿನ ಮುಂದೆ ಹೇಳುತ್ತಾರೆ. ಪೆರಿಯ ಪೆರುಮಾಳ್ ಅತ್ಯಂತ ಸಂತೋಷಗೊಂಡು ನಿನಗೆ ಮೋಕ್ಷವನ್ನು ತರುತ್ತೇನೆ ಎಂದು ಹೇಳುತ್ತಾರೆ. ಭಟ್ಟರ್ ಅತ್ಯಂತ ಆನಂದಿತರಾಗುತ್ತಾರೆ. ಆದರೆ ಹೇಳುತ್ತಾರೆ. ಪರಮಪದದಲ್ಲಿ ಒಂದು ವೇಳೆ ನಂಪೆರುಮಾಳನ್ನು ತಾವು ಕಾಣದಿದ್ದರೆ , ಅಲ್ಲಿ ಒಂದು ತೂತನ್ನು ಕೊರೆದು ಅಲ್ಲಿಂದ ತಾವು ಶ್ರೀರಂಗಕ್ಕೆ ಹಾರಿ ಬಂದು ಬಿಡುತ್ತೇನೆ ಎಂದು. ಅವರು ತನ್ನ ತಾಯಿಯ ಬಳಿಗೆ ಹೋಗಿ ಇದನ್ನು ಹೇಳುತ್ತಾರೆ. ಅವರ ತಾಯಿಯು ಇನ್ನೂ ಸಂತೋಷಗೊಳ್ಳುತ್ತಾರೆ. ತನ್ನ ಮಗನಿಗೆ ಮೋಕ್ಷ ದೊರಕಿತು ಎಂದು.(ಇದನ್ನೇ ನಾವು ನಿಷ್ಠೆ ಎಂದು ಕರೆಯುವುದು, ನಮ್ಮ ಪೂರ್ವಾಚಾರ್ಯರಿಗೆ ತಮ್ಮ ಜೀವನದ ಗುರಿ, ಸಫಲತೆ ತಿಳಿದಿತ್ತು). ಕೆಲವು ಶ್ರೀವೈಷ್ಣವರು ಭಟ್ಟರನ್ನು ಕೇಳುತ್ತಾರೆ. “ಪೆರಿಯ ಪೆರುಮಾಳರು ಅತ್ಯಂತ ಸಂತೋಷಗೊಂಡು ನಿಮಗೆ ಮೋಕ್ಷವನ್ನು ಕೊಡುತ್ತೇನೆ ಎಂದರು. ಆದರೆ ನೀವು ಅದನ್ನು ಏಕೆ ಒಪ್ಪಿಕೊಂಡಿರಿ? ನಾವು ಇಲ್ಲಿ ಇದ್ದು ಏನು ಮಾಡಬೇಕು? ಈ ಸಂಸಾರದಲ್ಲಿ ಅನೇಕ ಜೀವಾತ್ಮಗಳನ್ನು ಸರಿಪಡಿಸುವುದು ಇದೆ. ಯಾರು ಆ ಕೆಲಸವನ್ನು ಮಾಡುತ್ತಾರೆ?” ಎಂದಾಗ ಭಟ್ಟರ್ ಹೇಳುತ್ತಾರೆ, “ ನಾನು ಈ ಸಂಸಾರದಲ್ಲಿ ಸರಿ ಹೊಂದುವುದಿಲ್ಲ. ಹೇಗೆ ಅತಿ ಉನ್ನತ ಮಟ್ಟದ ತುಪ್ಪವು ಒಂದು ನಾಯಿಯ ಹೊಟ್ಟೆಗೆ ಹೇಗೆ ಸರಿಹೊಂದುವುದಿಲ್ಲವೋ ಹಾಗೆ ನಾನೂ ಈ ಲೋಕದಲ್ಲಿ ಸರಿಹೊಂದುವುದಿಲ್ಲ ಎಂದು ಹೇಳುತ್ತಾರೆ. “
ಭಟ್ಟರ್ ಎಲ್ಲಾ ಶ್ರೀವೈಷ್ಣವರನ್ನು ತನ್ನ ತಿರುಮಾಳಿಗೆಗೆ ಕರೆದು ಭರ್ಜರಿ ತಧಿಯಾರಾಧನೆಯನ್ನು ಮಾಡುತ್ತಾರೆ. ಅವರು ಪದ್ಮಾಸನದಲ್ಲಿ ಕುಳಿತು , ತಿರುನೆಡುಂದಾಂಟಕವನ್ನು ಪಠಿಸಲು ಆರಂಭಿಸುತ್ತಾರೆ. ಮತ್ತು ಮುಗುಳ್ನಗೆ ಬೀರುತ್ತಾ ತಮ್ಮ ತಿರುಮೇನಿಯನ್ನು ಬಿಟ್ಟು ಪರಮಪದಕ್ಕೆ ಸಲ್ಲುತ್ತಾರೆ. ಎಲ್ಲರೂ ಅಳಲು ಪ್ರಾರಂಭಿಸುತ್ತಾರೆ. ಆದರೆ ಚರಮ ಕೈಂಕರ್ಯವನ್ನೂ ಮಾಡಲು ತಯಾರಾಗುತ್ತಾರೆ. ಆಂಡಾಳ್ ಅಮ್ಮಂಗಾರ್ ಸಂತೋಷದಿಂದ ತಮ್ಮ ಮಗನ ಚರಮ ತಿರುಮೇನಿಯನ್ನು ಅಪ್ಪಿಕೊಂಡು ಅವರಿಗೆ ವೈಭವದ ಬೀಳ್ಗೊಡುಗೆ ಕೊಡುತ್ತಾರೆ. ಭಟ್ಟರ್ನ ಜೀವನವು ಕಲ್ಲನ್ನೂ ಕರಗಿಸಬಲ್ಲದು.
ನಾವೆಲ್ಲರೂ ಭಟ್ಟರ್ನ ಪಾದಕಮಲಗಳನ್ನು ಪ್ರಾರ್ಥಿಸೋಣ ಮತ್ತು ನಮಗೂ ಎಂಪೆರುಮಾನರ ಮತ್ತು ಆಚಾರ್ಯರ ಮೇಲೆ ಅಂತಹ ಒಂದು ಭಾಂಧವ್ಯವನ್ನು ಕಲ್ಪಿಸುವಂತೆ ಆಶಿಸೋಣ.
ಭಟ್ಟರ್ ತನಿಯನ್
ಶ್ರೀ ಪರಾಶರ ಭಟ್ಟಾರ್ಯ ಶ್ರೀರಂಗೇಶ ಪುರೋಹಿತ
ಶ್ರೀ ವತ್ಸಾಂಗ ಸುತಃ ಶ್ರೀಮಾನ್ ಶ್ರೇಯಸೇ ಮೇಸ್ತು ಭೂಯಸೇ
ನಮ್ಮ ಮುಂದಿನ ಲೇಖನದಲ್ಲಿ ನಂಜೀಯರ್ ವೈಭವವನ್ನು ತಿಳಿದುಕೊಳ್ಳೋಣ.
ಪರಾಶರ ಭಟ್ಟರ್ ತಿರುವಡಿಗಳೇ ಶರಣಮ್
ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ
ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಆರ್ಕೈವ್ ಮಾಡಲಾಗಿದೆ https://guruparamparai.koyil.org, ಮತ್ತು ಭೇಟಿ ಮಾಡಿ http://ponnadi.blogspot.in/
ಮೂಲ : 6000 ಪಡಿ ಗುರು ಪರಂಪರಾ ಪ್ರಭಾವಮ್, ಪೆರಿಯ ತಿರುಮುಡಿ ಅಡೈವು, ವ್ಯಾಖ್ಯಾನಗಳು
ಸಂಗ್ರಹ – https://guruparamparai.koyil.org/2012/09/11/parasara-bhattar/
ರಕ್ಷಿತ ಮಾಹಿತಿ: https://guruparamparai.koyil.org
ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org