ಪೆರಿಯಾಳ್ವಾರ್

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

periazhvar

ತಿರುನಕ್ಷತ್ರಮ್ : ಆನಿ, ಸ್ವಾತಿ

ಅವತಾರ ಸ್ಥಲಮ್ : ಶ್ರೀವಿಲ್ಲಿಪುತ್ತೂರ್

ಆಚಾರ್ಯನ್ : ವಿಶ್ವಕ್ಸೇನರ್

ಕೃತಿಗಳು : ತಿರುಪ್ಪಲ್ಲಾಣ್ಡು, ಪೆರಿಯಾಳ್ವಾರ್ ತಿರುಮೊಳಿ

ಪರಮಪದಕ್ಕೆಸೇರಿದಸ್ಥಳ : ತಿರುಮಾಲಿರುಂಚೋಲೈ

ಪೆರಿಯಾವಾಚಾನ್ ಪಿಳ್ಳೈ ತಮ್ಮ ತಿರುಪ್ಪಲ್ಲಾಣ್ಡು ವ್ಯಾಖ್ಯಾನ ಅವತಾರಿಕೆಯಲ್ಲಿ ಪೆರಿಯಾಳ್ವಾರರನ್ನು ಅದ್ಭುತವಾಗಿ ವೈಭವೀಕರಿಸುತ್ತಾರೆ. ಅವರು ಪೆರಿಯಾಳ್ವಾರರ ಅವತಾರದ ಉದ್ದೇಶ ಈ ಸಂಸಾರದಿಂದ ಕಷ್ಟ ಪಡುತ್ತಿರುವ ಜೀವಾತ್ಮರನ್ನು ಮೇಲೆತ್ತುವುದಕ್ಕಾಗಿ ಎಂದು ಗುರುತಿಸಿದ್ದಾರೆ. ಪೆರಿಯಾಳ್ವಾರರು ಸ್ವತಃ:ಎಂಪೆರುಮಾನನ ಅನುಗ್ರಹದಿಂದ ಎಂಪೆರುಮಾನನ ಕುರಿತು ‘ಸಹಜ ದಾಸ್ಯ’ ದಿಂದ ಭೂಷಿತರಾಗಿದ್ದಾರೆ. ಅವರು ಕೈಂಕರ್ಯವನ್ನು ಮಾಡಿಕೊಂಡು ತಮ್ಮ ಜೀವನವನ್ನು ನಿರ್ವಹಿಸಲು ಬಯಸಿದರು ಮತ್ತು ಯಾವ ಕೈಂಕರ್ಯವು ಅತ್ಯುತ್ತಮವಾದದ್ದೆಂದು ತಿಳಿಯಲು ಶಾಸ್ತ್ರಗಳನ್ನು ಅಭ್ಯಸಿದರು. ಶ್ರೀ ಕೃಷ್ಣನು ಕಂಸನ ಸಭೆಗೆ ಹೋಗುವುದಕ್ಕೆ ಮೊದಲು ಮಥುರಾದಲ್ಲಿ ಸ್ವತಃ ಮಾಲಾಕಾರನ ಮನೆಗೆ ಹೋಗಿ ಕೆಲವು ಮಾಲೆಗಳಿಗಾಗಿ ಬಿನ್ನವಿಸಿಕೊಂಡನು ಮತ್ತು ಆ ಮಾಲಾಕಾರನು ಬಹು ಪ್ರೀತಿ ಮತ್ತು ಒಲುಮೆಯಿಂದ ಮಾಲೆಯೊಂದನ್ನು ಕೊಡಲು, ಕಣ್ಣನ್ ಎಂಪೆರುಮಾನನು ಅತೀವ ಸಂತೋಷಗೊಳ್ಳುತ್ತಾನೆ ಮತ್ತು ಬಹು ಹರ್ಷದಿಂದ ಅದನ್ನು ಧರಿಸುತ್ತಾನೆ. ಇದನ್ನು ಗಮನಿಸಿದ ಪೆರಿಯಾಳ್ವಾರರು ಹೂಮಾಲೆಗಳನ್ನು ಮಾಡಿಕೊಡುವುದು ಎಂಪೆರುಮಾನನಿಗೆ ಅತ್ಯಂತ ಸಂತುಷ್ಟಗೊಳಿಸುವ ಸೇವೆ ಎಂದು ನಿರ್ಧರಿಸಿದರು. ಅವರು ತೋಟವೊಂದನ್ನು ಮಾಡಲು ಪ್ರಾರಂಭಿಸಿ ಅದರಲ್ಲಿ ನೂತನ ಹೂಗಿಡಗಳ ಬೀಜಗಳನ್ನು ಬಿತ್ತುತ್ತಾರೆ, ಅವುಗಳನ್ನು ಪೋಷಿಸುತ್ತಾರೆ, ಮತ್ತು ಹೊಸ ಮಾಲೆಯೊಂದನ್ನು ಪ್ರತಿದಿನ ಮಾಡಿಕೊಂಡು ಶ್ರೀವಿಲ್ಲಿಪುತ್ತೂರ್ ಎಂಪೆರುಮಾನನಿಗೆ ಅತೀವ ಪ್ರೀತಿ ಮತ್ತು ಅಕ್ಕರೆಯಿಂದ ಅರ್ಪಿಸುತ್ತಾರೆ.

ಪೆರಿಯಾಳ್ವಾರ್ ಮತ್ತು ಇತರ ಆಳ್ವಾರರುಗಳ ನಡುವೆ ಒಂದು ದೊಡ್ಡ ವ್ಯತ್ಯಾಸವಿದೆ. ಇತರ ಆಳ್ವಾರರುಗಳು ತಮ್ಮ ಅಪೇಕ್ಷೆಗಳನ್ನು (ಎಂಪೆರುಮಾನನಿಗೆ ನಿರಂತರ ಸೇವೆ ಸಲ್ಲಿಸುವುದು) ಪೂರೈಸಿಕೊಳ್ಳಲು ಬಯಸುತ್ತಾರೆ. ಆದರೆ ಪೆರಿಯಾಳ್ವಾರರು ತಮ್ಮ ಆಕಾಂಕ್ಷೆಗಳನ್ನೂ ಸಹ ಕಡೆಗಣಿಸಿ ಎಂಪೆರುಮಾನನ ಅಪೇಕ್ಷೆಗಳನ್ನು (ಬಳಲುತ್ತಿರುವ ಅನೇಕ ಜೀವಾತ್ಮಾಗಳನ್ನು ಎಂಪೆರುಮಾನನೊಂದಿಗೆ ಪರಮಪದದಲ್ಲಿ ಸೇರಿಸುವುದು) ಈಡೇರಿಸುವುದರಲ್ಲಿ ತಮ್ಮ ಗಮನವನ್ನು ಕೇಂದ್ರೀಕರಿಸುತ್ತಾರೆ. ಇತರ ಆಳ್ವಾರರು ಈಶ್ವರನು ತಮ್ಮ ರಕ್ಷಕ ಮತ್ತು ತಾವು ರಕ್ಷಿತರು ಎಂದು ಭಾವಿಸಿ ತಮ್ಮ ಭಯವನ್ನು ತೊಡೆದುಹಾಕುತ್ತಾರೆ. ಪೆರಿಯಾಳ್ವಾರರು ತಾವು ರಕ್ಷಕರು ಮತ್ತು ಈಶ್ವರನು ರಕ್ಷಿತನು ಎಂದು ಭಾವಿಸುತ್ತಾರೆ. ಈ ಅಂಶವನ್ನು ಪಿಳ್ಳೈ ಲೋಕಾಚಾರ್ಯರು ಮತ್ತು ಮಾಮುನಿಗಳು ಮತ್ತಷ್ಟು ಸುಂದರವಾಗಿ ವಿವರಿಸುತ್ತಾರೆ, ಅದನ್ನು ನಾವು ಮುಂದಿನ ಭಾಗಗಳಲ್ಲಿ ನೋಡಬಹುದು.
ಹಾಗೆಯೇ, ತಿರುಪ್ಪಲ್ಲಾಂಡು ಇತರ ದಿವ್ಯ ಪ್ರಬಂಧಗಳಿಗೆ ಹೋಲಿಸಿದರೆ ಬಹುವಾಗಿ ಶ್ಲಾಘಿಸಲ್ಪಟ್ಟಿದೆ. ಇತರ ಪ್ರಬಂಧಗಳು ಅನೇಕ ವೇದಾಂತಗಳಿಗೆ ಸಂಬಂಧಿಸಿದ ಸಂಕೀರ್ಣ ವಿಷಯಗಳನ್ನು ಚರ್ಚಿಸಿದರೆ, ತಿರುಪ್ಪಲ್ಲಾಂಡು ಸರಳವಾಗಿ ಎಂಪೆರುಮಾನನಿಗೆ ಮಂಗಳಾಶಾಸನ ಮಾಡುವುದರಲ್ಲಿ ಗಮನವಿಟ್ಟಿದೆ. ಇತರ ಪ್ರಬಂಧಗಳು ಗಾತ್ರದಲ್ಲಿ ದೊಡ್ಡದಾದರೆ, ಈ ಪ್ರಬಂಧವು ಚಿಕ್ಕದಾಗಿ ಚುರುಕಾಗಿದೆ – ಕೇವಲ ೧೨ ಪಾಶುರಗಳಲ್ಲಿ ಎಲ್ಲ ಪ್ರಮುಖವಾದ ತತ್ತ್ವಗಳೂ ವಿವರಿಸಲ್ಪಟ್ಟಿವೆ.

ಪಿಳ್ಳೈ ಲೋಕಾಚಾರ್ಯರು ಶ್ರೀ ವಚನಭೂಷಣ ದಿವ್ಯ ಶಾಸ್ತ್ರದಲ್ಲಿ, ಸಿದ್ಧೋಪಾಯ ನಿಷ್ಠರ (ಭಗವಾನನೇ ಉಪಾಯ ಮತ್ತು ಉಪೇಯ ಎಂಬ ತತ್ತ್ವದಲ್ಲಿ ಪೂರ್ಣವಾಗಿ ನೆಲೆಸಿರುವವರು) ದಿನಚರಿಯಲ್ಲಿ ಮಂಗಳಾಶಾಸನದ ವೈಭವಗಳನ್ನು ವಿವರಿಸುತ್ತಾರೆ. ಶ್ರೀವೈಷ್ಣವ ದಿನಚರಿಯು ‘ಶ್ರೀವೈಷ್ಣವ ಲಕ್ಷಣಂ’ ಸರಣಿ ಲೇಖನದಲ್ಲಿ ( http://ponnadi.blogspot.in/p/srivaishnava-lakshanam.html ) ಇಲ್ಲಿ ಈಗಾಗಲೇ ಚರ್ಚಿಸಲ್ಪಟ್ಟಿದೆ – http://ponnadi.blogspot.in/2012/08/srivaishnava-lakshanam-10.html ಮತ್ತು http://ponnadi.blogspot.in/2012/08/srivaishnava-lakshanam-11.html.

ಮಂಗಳಾಶಾಸನವೆಂದರೆ ಇನ್ನೊಬ್ಬರ ಕ್ಷೇಮಕ್ಕಾಗಿ ಬಯಸುವುದು/ಪ್ರಾರ್ಥಿಸುವುದು. ಆಳ್ವಾರರು ನಿರಂತರವಾಗಿ ಎಂಪೆರುಮಾನನ ಕ್ಷೇಮದಲ್ಲಿ ಗಮನವಿಟ್ಟಿದ್ದರು. ಆದರೆ ಪಿಳ್ಳೈ ಲೋಕಾಚಾರ್ಯರು ಎಂಪೆರುಮಾನನೊಂದಿಗೆ ಪೆರಿಯಾಳ್ವಾರರ ಬಾಂಧವ್ಯ ಇತರರಿಗಿಂತ ಬಹು ದೊಡ್ಡದು ಎಂದು ತೋರಿಸುತ್ತಾರೆ. ಇದು ಈಗಾಗಲೇ ಪೆರಿಯಾಳ್ವಾರರ ‘ಅರ್ಚಾವತಾರ ಅನುಭವಮ್’ ನ ಪ್ರಸ್ತಾವನಾ ಭಾಗದಲ್ಲಿ ವಿವರಿಸಲ್ಪಟ್ಟಿದೆ – http://ponnadi.blogspot.in/2012/10/archavathara-anubhavam-periyazhwar.html. ಈಗ ನಾವು ಪೆರಿಯಾಳ್ವಾರರ ಮತ್ತು ಶ್ರೀ ಭಾಷ್ಯಕಾರರ(ರಾಮಾನುಜರ) ವೈಭವಗಳನ್ನು ಸೊಗಸಾಗಿ ತೆರೆದಿಡುವ 255 ನೆಯ ಸೂತ್ರವನ್ನು ನೋಡೋಣ.

ಅಲ್ಲಾತವರ್ಗಳೈಪ್ಪೋಲೇ ಕೇಟ್ಕಿಟ್ರವರ್ಗಳುಡೈಯವುಮ್, ಚೊಲ್ಲುಕಿಟ್ರವರ್ಗಳುಡೈಯವುಮ್ ತನಿಮೈಯೈತ್ತವಿರ್ಕ್ಕೈಯನ್ಟ್ರಿಕ್ಕೇ ಆಳುಮಾಳಾರ್ ಎನ್ಗಿಟ್ರವನುಡೈಯ ತನಿಮೈಯೈತ್ತವಿರ್ಕ್ಕೈಕ್ಕಾಗವಾಯಿಟ್ರು ಭಾಷ್ಯಕಾರರುಮ್ ಇವರುಮ್ ಉಪದೇಚಿಪ್ಪದು.
ಇತರ ಆಳ್ವಾರರುಗಳಂತಲ್ಲದೆ, ಪೆರಿಯಾಳ್ವಾರ್ ಮತ್ತು ಭಾಷ್ಯಕಾರರು ಜೀವಾತ್ಮಗಳನ್ನು ಸುಧಾರಿಸಲು ಮತ್ತು ಅವರನ್ನು ಎಂಪೆರುಮಾನನ ಮಂಗಳಾಶಾಸನದಲ್ಲಿ ತೊಡಗಿಸಲು ಶಾಸ್ತ್ರಗಳ ಅರ್ಥಗಳನ್ನು ಬೋಧಿಸುತ್ತಾರೆ, ಏಕೆಂದರೆ ಅದು ಎಂಪೆರುಮಾನನ ಏಕಾಂಗಿತನವನ್ನು ಹೋಗಲಾಡಿಸುತ್ತದೆ (ಎಂಪೆರುಮಾನನು ಸ್ವಾಭಾವಿಕವಾಗಿ ಪ್ರತಿಯೊಬ್ಬರೂ ತನ್ನ ಸೇವೆ ಮಾಡಬೇಕೆಂದು ಬಯಸುತ್ತಾನೆ, ಏಕೆಂದರೆ ಎಲ್ಲರೂ ಆತನಿಗೆ ಸೇರಿದವರು, ಹೇಗೆ ಒಬ್ಬ ತಂದೆ ಅಥವಾ ತಾಯಿ ತಮ್ಮ ಮಕ್ಕಳಲ್ಲೊಬ್ಬರು ತಮ್ಮೊಂದಿಗಿಲ್ಲದಿದ್ದರೆ ಸಂತೋಷವಾಗಿರುವುದಿಲ್ಲವೋ, ಹಾಗೆ ಅನೇಕ ಜೀವಾತ್ಮಗಳಲ್ಲಿ ಒಬ್ಬ ಜೀವಾತ್ಮ ತನ್ನೊಂದಿಗಿಲ್ಲದಿದ್ದರೆ ಎಂಪೆರುಮಾನನು ಸಂತೋಷವಾಗಿರುವುದಿಲ್ಲ). ಇಲ್ಲಿ ನಿಜವಾದ ಲಕ್ಷ್ಯವು ಬೋಧಕರ ಏಕಾಂಗಿತನವನ್ನು ಹೋಗಲಾಡಿಸುವುದಾಗಲಿ, ಬೋಧಿತರ ಏಕಾಂಗಿತನವನ್ನು ಹೋಗಲಾಡಿಸುವುದಾಗಲಿ ಮತ್ತು ಜೀವಾತ್ಮಗಳನ್ನು ಉದ್ಧರಿಸುವುದಾಗಲಿ ಅಲ್ಲ – ಆದರೆ ಎಂಪೆರುಮಾನನ ಸ್ವಾಭಾವಿಕ ಬಯಕೆಯನ್ನು ಈಡೇರಿಸುವುದು ಮತ್ತು ಜೀವಾತ್ಮಗಳನ್ನು ತಮ್ಮ ಸ್ವಾಭಾವಿಕ ಸ್ಥಾನದಲ್ಲಿ ನೆಲೆಗೊಳಿಸುವುದೇ ಆಗಿದೆ.

ಮಾಮುನಿಗಳು ಈ ಸೂತ್ರಕ್ಕೆ ತಮ್ಮ ವ್ಯಾಖ್ಯಾನದಲ್ಲಿ ಹೇಗೆ ವಿವರಿಸುತ್ತಾರೆಂದರೆ, ಆಳ್ವಾರರು ಎಂಪೆರುಮಾನನ ಈ ಅತಿ ಮೃದು ಸ್ವಭಾವವನ್ನು ಅರಿತಿದ್ದರು ಮತ್ತು ಅಂತಹ ಮೃದು ಸ್ವಭಾವದ ವ್ಯಕ್ತಿಯು ಜೀವಾತ್ಮರ ಅಗಲಿಕೆಯನ್ನು ತಾಳಿಕೊಳ್ಳಲಾಗದೆಂದು ನಿರ್ಧರಿಸಿದರು ಮತ್ತು ಅದರ ಮೇಲೆಯೇ ಪೂರ್ಣವಾಗಿ ತಮ್ಮ ಲಕ್ಷ್ಯವನ್ನು ಕೇಂದ್ರೀಕರಿಸಲು ಬಯಸಿದರು. ಅವರು ಸುಂದರವಾಗಿ ಹೀಗೆ ತೆರೆದಿಟ್ಟಿದ್ದಾರೆ – ಪಿಳ್ಳೈಲೋಕಾಚಾರ್ಯರು ಭಾಷ್ಯಕಾರರ್ (ಎಂಪೆರುಮಾನಾರ್, ರಾಮಾನುಜರ್, ಇತ್ಯಾದಿಗಳ ಬದಲಿಗೆ) ಎಂದು ಹೇಳಿದ್ದೇಕೆಂದರೆ, ಭಾಷ್ಯಕಾರರ್ ಎಂದರೆ ವೇದಾಂತದ ಸಾರವನ್ನು ಶ್ರೀಭಾಷ್ಯದ ಮೂಲಕ ಸ್ಥಾಪಿಸಿದವರು ಎಂದರ್ಥ – ಮತ್ತು ಹಾಗೆಯೇ ಎಂಪೆರುಮಾನನ ಸಂತೋಷಕ್ಕಾಗಿ ಮಾತ್ರವೇ ಗಮನವಿರಿಸಿದ ಈ ಕ್ರಿಯೆಯು ವೇದಾಂತದ ನಿಟ್ಟಿನಲ್ಲಿಯೇ ಇದೆ.
ಮಾಮುನಿಗಳು ತಮ್ಮ ಉಪದೇಶ ರತ್ನಮಾಲೆಯಲ್ಲಿ 5 ಪಾಶುರಗಳಲ್ಲಿ ಸತತವಾಗಿ ಪೆರಿಯಾಳ್ವಾರರನ್ನು ವೈಭವೀಕರಿಸತ್ತಾರೆ.
• 16 ನೇ ಪಾಶುರದಲ್ಲಿ, ಅವರು ತಮ್ಮ ಸ್ವಂತ ಹೃದಯಕ್ಕೇ ಹೇಳುವುದೇನೆಂದರೆ ಆನಿ ಸ್ವಾತಿ ದಿನವು ಬಹುವಾಗಿ ವೈಭವೀಕರಿಸಲ್ಪಡಬೇಕು, ಏಕೆಂದರೆ ಅಂದು ಬಹು ಶುಭದಾಯಕವಾದ ತಿರುಪ್ಪಲ್ಲಾಣ್ಡು ಸಂಕಲಿಸಿ ನಮಗೆ ನೀಡಿದ ಪಟ್ಟರ್ಪಿರಾನ್ (ಪೆರಿಯಾಳ್ವಾರ್) ಜನ್ಮದಿನ .
• 17 ನೇ ಪಾಶುರದಲ್ಲಿ, ಅವರು ತಮ್ಮ ಸ್ವಂತಹೃದಯಕ್ಕೆ ಆದೇಶಿಸುವುದೇನೆಂದರೆ ಪೆರಿಯಾಳ್ವಾರರ ಅವತಾರ ದಿನವಾದ ಆನಿ ಸ್ವಾತಿಯ ವೈಭವಗಳನ್ನು ಕೇಳಿ ಆನಂದಿಸುವ ಜ್ಞಾನಿಗಳಿಗೆ ಸಮನಾದವರು ಈ ಇಡೀ ಪ್ರಪಂಚದಲ್ಲಿ ಬೇರಾರೂ ಇಲ್ಲ ಎಂದು ಸದಾಕಾಲವೂ ಭಾವಿಸಬೇಕು.
• 18 ನೇ ಪಾಶುರದಲ್ಲಿ, ಅವರು ವಿವರಿಸುವುದೇನೆಂದರೆ ಮಂಗಳಾಶಾಸನ ಮಾಡುವುದರಲ್ಲಿ ಪೆರಿಯಾಳ್ವಾರರ ಆಸಕ್ತಿಯು ಇತರ ಆಳ್ವಾರರಿಗಿಂತ ಬಹು ಹಿರಿದು, ಮತ್ತು ಎಂಪೆರುಮಾನನ ಕುರಿತು ಅವರ ಉಕ್ಕಿಹರಿಯುವ ಪ್ರೀತಿಯಿಂದಾಗಿ ಅವರು ಪೆರಿಯಾಳ್ವಾರ್ ಎಂದು ಪ್ರಖ್ಯಾತರಾದರು.
• 19 ನೇ ಪಾಶುರದಲ್ಲಿ, ಇತರ ಆಳ್ವಾರರರ (ದೋಷರಹಿತರಾದವರು – ಇಲ್ಲಿ ದೋಷವೆಂದರೆ ಇತರ ಉಪಾಯಗಳಾದ ಕರ್ಮ/ಜ್ಞಾನ/ಭಕ್ತಿ ಗಳಲ್ಲಿ ಅಕ್ಕರೆಯಿರುವುದು ಮತ್ತು ಎಂಪೆರುಮಾನನನ್ನು ಸೇರುವ ಅತೀವ ಹಂಬಲವಿಲ್ಲದಿರುವುದು) ಎಲ್ಲ ಪಾಶುರಗಳಲ್ಲಿ (ದೋಷರಹಿತವಾದವು – ಇಲ್ಲಿ ದೋಷವೆಂದರೆ ಎಂಪೆರುಮಾನನ ಹೊರತು ಇತರ ವಿಷಯಗಳನ್ನು ಚರ್ಚಿಸುವುದು) ತಿರುಪ್ಪಲ್ಲಾಣ್ಡು ಅಗ್ರಗಣ್ಯವಾದದ್ದು. ಹೇಗೆ ಪ್ರಣವವು ಸಂಸ್ಕೃತ ವೇದಗಳ ಸಾರವಾಗಿ ಪ್ರಧಾನವಾಗಿದೆಯೋ ಹಾಗೆ ತಿರುಪ್ಪಲ್ಲಾಣ್ಡು ದ್ರಾವಿಡ ವೇದದಲ್ಲಿ ಅಗ್ರಗಣ್ಯವಾಗಿದ್ದು ಅದರ ಸಾರವಾಗಿದೆ ಏಕೆಂದರೆ ಅದು ಮಂಗಳಾಶಾಸನವನ್ನು ಚರ್ಚಿಸುತ್ತದೆ.
• 20 ನೇ ಪಾಶುರದಲ್ಲಿ ಅವರು ತಮ್ಮ ಹೃದಯವನ್ನು ಕೇಳುವುದೇನೆಂದರೆ ಎಲ್ಲಾ ಪ್ರಮಾಣಗಳನ್ನು ಅವಲೋಕಿಸಿ ತಿರುಪ್ಪಲ್ಲಾಂಡಿಗಿಂತ ಉತ್ತಮವಾದ ಪ್ರಬಂಧವು ಇದೆಯೇ ಎಂದು ನೋಡಲು ಮತ್ತು ಎಲ್ಲ ಆಳ್ವಾರರನ್ನು ವೀಕ್ಷಿಸಿ ಪೆರಿಯಾಳ್ವಾರರಿಗಿಂತ ಶ್ರೇಷ್ಠರಾದವರು ಇದ್ದಾರೆಯೇ ಎಂದು ನೋಡಲು ಹೇಳುತ್ತಾರೆ.

ಅವರ ಅನನ್ಯ ವೈಶಿಷ್ಟ್ಯವೇನೆಂದರೆ ಅವರು ಪೆರಿಯ ಪೆರುಮಾಳ್ ಗೆ ತಮ್ಮ ಮಗಳಾದ ಆಂಡಾಳನ್ನು ವಿವಾಹ ಮಾಡಿಕೊಟ್ಟು ಅವರ ಮಾವನಾಗಿರುವುದು.
ಇದನ್ನು ಮನದಲ್ಲಿಟ್ಟು ನಾವು ಈಗ ಅವರ ಚರಿತ್ರೆಯನ್ನು ನೋಡೋಣ.
ಪೆರಿಯಾಳ್ವಾರರು ಅನೇಕ ವೇದಪಾರಂಗತರು ವಾಸಿಸುತ್ತಿದ್ದ ಶ್ರೀವಿಲ್ಲಿಪುತ್ತೂರ್ ನಲ್ಲಿ ಜನಿಸಿದರು. ಅವರು ಆನಿ ಸ್ವಾತಿಯಂದು ಜನಿಸಿದರು ಮತ್ತು ಅವರ ತಂದೆತಾಯಿಗಳು ಅವರಿಗೆ ವಿಷ್ಣುಚಿತ್ತರೆಂದು ಹೆಸರಿಟ್ಟರು. ಅವರು ಪರತತ್ತ್ವ ನಿರೂಪಣೆಯನ್ನು (ಶ್ರೀಮನ್ನಾರಾಯಣನ ಪ್ರಾಧಾನ್ಯವನ್ನು ಸ್ಥಾಪಿಸುವುದರ ಮೂಲಕ) ಮಾಡಿದ್ದರಿಂದ, ಹೇಗೆ ವೇದಾತ್ಮಾ (ವೇದವೇ ಶರೀರವಾಗಿ ಉಳ್ಳವನು) ಎಂದು ಗರುಡನು ಕರೆಯಲ್ಪಡುತ್ತಾನೋ ಮತ್ತು ಶ್ರೀಮನ್ನಾರಾಯಣನ ಪಾದಾರವಿಂದಗಳನ್ನು ನಿರಂತರವೂ ಹಿಡಿದಿರುತ್ತಾನೋ (ಅದರಿಂದಾಗಿ ಶ್ರೀಮನ್ನಾರಾಯಣನ ಪರತ್ವವನ್ನು ಸ್ಥಾಪಿಸಿರುವನೋ) ಹಾಗೆ ಅವರು ಗರುಡಾಳ್ವರರ ಅಂಶವೆಂದು ಪರಿಗಣಿಸಲ್ಪಡುತ್ತಾರೆ (ಆಳ್ವಾರುಗಳು ಎಂಪೆರುಮಾನನಿಂದ ಈ ಸಂಸಾರದಿಂದ ಆರಿಸಲ್ಪಟ್ಟು ದಿವ್ಯವಾಗಿ ಆಶೀರ್ವದಿಸಲ್ಪಟ್ಟಿದ್ದವರು).
ಅವರು ಜನಿಸುವಾಗಲೇ ವಟಪತ್ರಶಾಯಿಯ ನಿರ್ಹೇತುಕ ಕಾರುಣ್ಯದಿಂದ ಅನುಗ್ರಹಿಸಲ್ಪಟ್ಟಿದ್ದರು, ಹೇಗೆ ಪ್ರಹ್ಲಾದನು ಭಗವದ್ ಭಕ್ತಿಯೊಂದಿಗೆ ಜನಿಸಿದನೋ ಹಾಗೆ. ಶಾಸ್ತ್ರದಲ್ಲಿ ಹೀಗೆ ಹೇಳಲಾಗಿದೆ “ನ ಅಕಿಂಚಿತ್ ಕುರ್ವತ್ ಶೇಷತ್ವಮ್” ಅರ್ಥಾತ್ ಯಾವಾಗ ಒಬ್ಬ ವ್ಯಕ್ತಿಯು ಎಂಪೆರುಮಾನನಿಗೆ ಒಂದು ಅಲ್ಪ ಸೇವೆಯನ್ನೂ ಮಾಡುವುದಿಲ್ಲವೋ ಆಗ ಆ ವ್ಯಕ್ತಿಯ ಶೇಷತ್ವವು ಉಳಿಯುವುದಿಲ್ಲ. ತಾವು ಕೂಡ ಎಂಪೆರುಮಾನನ ಸಂತೋಷಕ್ಕಾಗಿಯೇ ಯಾವುದಾದರೂ ಕೈಂಕರ್ಯದಲ್ಲಿ ತೊಡಗಬೇಕೆಂದು ಆಲೋಚಿಸಿ, ಅವರು ಪುರಾಣಗಳು, ಇತ್ಯಾದಿಗಳನ್ನು ಅವಲೋಕಿಸುತ್ತಾರೆ. ಅವರು ಸರ್ವೇಶ್ವರನು ಮಥುರಾದಲ್ಲಿ ಕೃಷ್ಣನಾಗಿ ಉದಯಿಸುವುದನ್ನು ಹೀಗೆ ಗಮನಿಸುತ್ತಾರೆ:

ಈಶ ನಾರಾಯಣ ಶ್ರೀಮನ್ ಕ್ಷೀರಾರ್ಣವ ನಿಕೇತನ: ।
ನಾಗ ಪರ್ಯಂಗಮ್ ಉತ್ಸೃಜ್ಯ ಹ್ಯಾಗತೋ ಮಧುರಾಂ ಪುರೀಮ್ ।।
ಅರ್ಥಾತ್ :
ಕ್ಷೀರಾಬ್ದಿಯಲ್ಲಿ ಪವಡಿಸಿದ್ದ ಶ್ರೀಮನ್ ನಾರಾಯಣನು ತನ್ನ ಆದಿಶೇಷ ಪಲ್ಲಂಗವನ್ನು ತ್ಯಜಿಸಿ ಮಥುರಾಪುರಿಯಲ್ಲಿ ಶ್ರೀ ಕೃಷ್ಣನಾಗಿ ಅವತರಿಸಿದನು.

ಹಾಗೆಯೇ ನಮ್ಮಾಳ್ವಾರರು ಹೇಳುತ್ತಾರೆ: ” ಮಣ್ಣಿನ್ ಭಾರಂ ನೀಕ್ಕುದರ್ಕೇ ವಡಮಥುರೈ ಪಿರಂದಾನ್ ” ಅರ್ಥಾತ್ ” ಭೂದೇವಿಯ ಯಾತನೆಯನ್ನು ತೊಡೆದುಹಾಕುವುದಕ್ಕಾಗಿಯೇ ಕಣ್ಣನ್ ಎಂಪೆರುಮಾನನು ಮಥುರೆಯಲ್ಲಿ ಉದಯಿಸಿದನು “. ಮಹಾಭಾರತದಲ್ಲಿ ಕೂಡ ಹೀಗೆ ಹೇಳಲಾಗಿದೆ “ಅನಂತನಾದ ಭಗವಾನನು ಕಣ್ಣನ್ ಎಂಪೆರುಮಾನನಾಗಿ ಉದಯಿಸಿ ಧರ್ಮವನ್ನು ಸ್ಥಾಪಿಸಲು, ಸಾಧುಗಳನ್ನು ರಕ್ಷಿಸಲು ಮತ್ತು ದುಷ್ಟರನ್ನು ನಾಶಗೊಳಿಸಲು ದ್ವಾರಕೆಯಲ್ಲಿ ನೆಲೆಸುತ್ತಾನೆ”. ಅಂತಹಾ ಎಂಪೆರುಮಾನನು ಅತ್ಯಂತ ಸುಂದರಿಯಾದ ದೇವಕಿಯ ಮಗನಾಗಿ ಜನಿಸುತ್ತಾನೆ ಮತ್ತು ಅತ್ಯಂತ ಸುಂದರಿಯಾದ ಯಶೋದೆಯ ಮಗನಾಗಿ ಬೆಳೆಯುತ್ತಾನೆ. ನಿತ್ಯಸೂರಿಗಳ ಮಾಲೆಗಳಿಂದ ಅಲಂಕರಿಸಲ್ಪಡುವ ಅಂತಹಾ ಸುಂದರನಾದ ಕೃಷ್ಣನು ಕಂಸನ ಮಾಲಾಕಾರನ ಬಳಿಗೆ ಹೋಗಿ ತನಗೆ ಕೆಲವು ಮಾಲೆಗಳನ್ನು ಕೊಡುವಂತೆ ಕೇಳಿದನು. ಸ್ವತಃ ಕಣ್ಣನ್ ಎಂಪೆರುಮಾನನೇ ಬಂದು ಮಾಲೆಗಳನ್ನು ಕೇಳಿದ್ದರಿಂದ ಅತಿ ಸಂತೋಷಗೊಂಡ ಮಾಲಾಕಾರನು ಎಂಪೆರುಮಾನನನ್ನು ಸಂತೋಷಗೊಳಿಸುವುದಕ್ಕಾಗಿ ತನ್ನಲ್ಲಿರುವ ಅತ್ಯುತ್ತಮವಾದ ಮತ್ತು ಅತಿ ನೂತನವಾದ ಮಾಲೆಗಳನ್ನು ಕೊಡುತ್ತಾನೆ. ಇದನ್ನು ಕಂಡು ಪೆರಿಯಾಳ್ವಾರರು ಬಹು ಪ್ರೀತಿ ಮತ್ತು ಒಲುಮೆಯಿಂದ ಸಿದ್ಧಗೊಳಿಸಿದ ಮಾಲೆಗಳನ್ನು ಅರ್ಪಿಸುವುದು ಎಂಪೆರುಮಾನನಿಗೆ ಅತ್ಯಂತ ಪ್ರಿಯವಾದ ಕೈಂಕರ್ಯವೆಂಬುದನ್ನು ತಿಳಿದುಕೊಳ್ಳುತ್ತಾರೆ ಮತ್ತು ಶ್ರೀವಿಲ್ಲಿಪುತ್ತೂರಿನ ವಟಪತ್ರಶಾಯಿ ಎಂಪೆರುಮಾನನಿಗೆ ಆ ಕೈಂಕರ್ಯವನ್ನು ಮಾಡಲು ಪ್ರಾರಂಭಿಸುತ್ತಾರೆ.
ಅದೇ ಕಾಲದಲ್ಲಿ ಪಾಂಡ್ಯ ರಾಜವಂಶಕ್ಕೆ ಸೇರಿದ ವಲ್ಲಭ ದೇವನೆಂಬ ರಾಜನು (ತನ್ನ ಮೀನಿನ ಧ್ವಜವನ್ನು ದಿವ್ಯವಾದ ಮೇರುಪರ್ವತದಲ್ಲಿ ನೆಟ್ಟವನು) ಪಾಂಡ್ಯ ರಾಜ್ಯವನ್ನು ದಕ್ಷಿಣದ ಮಧುರೆಯಿಂದ ಬಹು ಧಾರ್ಮಿಕವಾಗಿ ಆಳುತ್ತಿದ್ದನು. ಒಂದು ರಾತ್ರಿ ಆತನು ತನ್ನ ರಾಜ್ಯ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಎಂದು ನೋಡಲು ಮಾರುವೇಷದಲ್ಲಿ ನಡೆಯುತ್ತಿರುವಾಗ ಒಂದು ಮನೆಯ ಮುಂದೆ ಬ್ರಾಹ್ಮಣನೊಬ್ಬನು ಕುಳಿತಿರುವುದನ್ನು ಗಮನಿಸಿದನು. ರಾಜನು ಆತನ ಗುರುತು ಮತ್ತು ಎಲ್ಲಿಯವನೆಂದು ವಿಚಾರಿಸಲು ಆ ಬ್ರಾಹ್ಮಣನ್ನು  ತಾನು ಒಬ್ಬ ಬ್ರಾಹ್ಮಣ ಮತ್ತು ಗಂಗೆಯಲ್ಲಿ ಗಂಗಾಸ್ನಾನ ಮಾಡಿಕೊಂಡು ಹಿಂತಿರುಗುತ್ತಿರುವುದಾಗಿ ತಿಳಿಸಿದನು. ರಾಜನು ಅತನಿಗೆ ಒಂದು ಶ್ಲೋಕವನ್ನು ಹೇಳಲು ಕೇಳಿದಾಗ ಆ ಬ್ರಾಹ್ಮಣನು ಈ ಶ್ಲೋಕವನ್ನು ಪಠಿಸುತ್ತಾನೆ:

ವರ್ಷಾರ್ಥಮಷ್ಟೌ ಪ್ರಯತೇತ ಮಾಸಾನ್ ನಿಷಾರ್ಥಮರ್ಥಮ್ ದಿವಸಂ ಯತೇತ
ವಾರ್ಧಕ್ಯಹೇತೋರ್ ವಯಸಾ ನವೇನ ಪರತ್ರಹೇತೋರಿಹ ಜನ್ಮನಾ ಚ

ಜನರು ಮಳೆಗಾಲದ ೪ ತಿಂಗಳು ವಿಶ್ರಮಿಸಲು ವರ್ಷದ ೮ ತಿಂಗಳು ಕಷ್ಟಪಟ್ಟು ದುಡಿಯುತ್ತಾರೆ; ರಾತ್ರಿಯಲ್ಲಿ ಸಂತೋಷವಾಗಿರಲು ಅವರು ಹಗಲು ಕಷ್ಟಪಟ್ಟು ದುಡಿಯುತ್ತಾರೆ; ವೃದ್ಧಾಪ್ಯದಲ್ಲಿ ಸುಖವಾಗಿರಲು ಅವರು ಯೌವ್ವನದಲ್ಲಿ ಕಷ್ಟಪಟ್ಟು ದುಡಿಯುತ್ತಾರೆ; ಹಾಗೆಯೇ ಜನರು ಪರ ಜನ್ಮದಲ್ಲಿ ಒಳಿತಿಗಾಗಿ ಈ ಜನ್ಮದಲ್ಲಿ ಕಷ್ಟಪಟ್ಟು ಕೆಲಸ ಮಾಡಬೇಕು.
ಇದನ್ನು ಕೇಳಿದ ರಾಜನು ತಾನು ಈ ಜನ್ಮದಲ್ಲಿ ಭೌತಿಕ ಸಂಪತ್ತು ಮತ್ತು ಸೌಲಭ್ಯಗಳಿಂದ ಸುಖವಾಗಿದ್ದೇನೆ ಆದರೆ ನಂತರದ ಜನ್ಮದ ಬಗ್ಗೆ ಖಚಿತವಿಲ್ಲ ಮತ್ತು ಅದನ್ನು ತಿಳಿಯುವ ವಿಧಾನವೇನೆಂದು ಆಲೋಚಿಸಿದನು. ಆನಂತರ ಆತನು ತನ್ನ ಪುರೋಹಿತರ ಬಳಿಗೆ ಹೋಗಿ ಸರ್ವೋಚ್ಛ ದೇವನು ಯಾರೆಂದು ಹೇಗೆ ದೃಢಪಡಿಸುವುದು ಮತ್ತು ಆತನನ್ನು ಈ ಜನ್ಮದ ನಂತರ ಪಡೆಯುವುದು ಹೇಗೆಂದು ಕೇಳಿದನು. ಶ್ರೀಮನ್ನಾರಾಯಣನ ಪರಮ ಭಕ್ತನಾದ ಸೆಲ್ವ ನಂಬಿಯು ತಕ್ಷಣವೇ ಹೇಳುವುದೇನೆಂದರೆ ನಾವು ಎಲ್ಲ ವಿದ್ವಾಂಸರ ಸಭೆಯೊಂದನ್ನು ಕರೆಯಬೇಕು ಮತ್ತು ವೇದಾಂತದ ಆಧಾರದ ಮೇಲೆ ಪರತತ್ತ್ವವನ್ನು ದೃಢಪಡಿಸಬೇಕು ಎಂದು. ರಾಜನು ಸತ್ಯವನ್ನು ಪ್ರಮಾಣೀಕರಿಸಲು ವಿದ್ವಾಂಸರನ್ನು ಆಹ್ವಾನಿಸುತ್ತಾನೆ, ಏಕೆಂದರೆ ಆಪಸ್ತಂಭ ಧರ್ಮ ಸೂತ್ರದ ಪ್ರಕಾರ ಅತಿ ಮುಖ್ಯವಾದ ತತ್ತ್ವವೇನೆಂದರೆ “ಧರ್ಮಜ್ಞಸಮಯ: ಪ್ರಮಾಣಂ ವೇದಾಚ್ಚ” ಅರ್ಥಾತ್ “ವೇದವನ್ನು ಅರಿತವರ ಕ್ರಿಯೆಗಳು ಜ್ಞಾನದ ಪ್ರಾಥಮಿಕ ಮೂಲ ಮತ್ತು ವೇದವು ಎರಡನೆಯ ಮೂಲ”.
ರಾಜನು ಬಹು ಸಂಪತ್ತನ್ನು ತುಂಬಿರುವ ಚೀಲವೊಂದನ್ನು ತಯಾರಿಸಿ ಸತ್ಯವನ್ನು ಸ್ಥಾಪಿಸುವವರಿಗೆ ಬಹುಮಾನವಾಗಿ ಅದನ್ನು ಅಲಂಕೃತವಾದ ಚಾವಣಿಯಿಂದ ತೂಗುಹಾಕುತ್ತಾನೆ. ಅವನು ಆ ಇಡೀ ಪ್ರದೇಶದ ಎಲ್ಲ ವಿದ್ವಾಂಸರನ್ನೂ ಚರ್ಚೆಗಾಗಿ ಅರಮನೆಯಲ್ಲಿ ಸಭೆ ಸೇರಲು ಆಹ್ವಾನಿಸುತ್ತಾನೆ.

ವಟಪತ್ರಶಾಯೀ ಎಂಪೆರುಮಾನನು (ಶ್ರೀವಿಲ್ಲಿಪುತ್ತೂರ್) ಪೆರಿಯಾಳ್ವಾರರ ಮೂಲಕ ತನ್ನ ಸಾರ್ವಭೌಮತ್ವವನ್ನು ಸಿದ್ಧಪಡಿಸಿ (ವೇದಾಂತದಲ್ಲಿ ವಿವರಿಸಿರುವಂತೆ) ಸಂಸಾರಿಗಳನ್ನು ಉದ್ಧರಿಸಲು ಬಯಸುತ್ತಾನೆ, ಆಳ್ವಾರರ ಸ್ವಪ್ನದಲ್ಲಿ ಕಾಣಿಸಿಕೊಳ್ಳುತ್ತಾನೆ ಮತ್ತು ಬಹುಮಾನವನ್ನು ಪಡೆದು ತರಲು ಆದೇಶಿಸುತ್ತಾನೆ. ಆಳ್ವಾರರು ಎಂಪೆರುಮಾನನಿಗೆ ಪ್ರತ್ಯುತ್ತರಿಸುವುದೇನೆಂದರೆ ಆ ಬಹುಮಾನವು ಎಂಪೆರುಮಾನನ ಸಾರ್ವಭೌಮತ್ವವನ್ನು ವೇದಾಂತದ ಮೂಲಕ ಸ್ಥಾಪಿಸುವುದಕ್ಕಾಗಿ ಮತ್ತು ನಮ್ರತೆಯಿಂದ ಹೇಳುತ್ತಾರೆ “ತೋಟದಲ್ಲಿ ಕೆಲಸ ಮಾಡುವುದರಿಂದ ಒರಟಾಗಿರುವ ನನ್ನ ಕೈಗಳಿಂದ ನಾನು ಹೇಗೆ ಆ ಬಹುಮಾನವನ್ನು ಪಡೆದು ತರಲಿ?”. ಎಂಪೆರುಮಾನನು “ನಾನು ವೇದ ಮತ್ತು ಅದರ ಅರ್ಥಗಳನ್ನು ಅವಶ್ಯವಿರುವಷ್ಟು ಪ್ರಕಟಪಡಿಸುವವನಾದುದರಿಂದ ನಾನು ಎಲ್ಲವನ್ನೂ ನೋಡಿಕೊಳ್ಳುತ್ತೇನೆ” ಎಂದು ಒತ್ತಾಯಿಸುತ್ತಾನೆ. ಆಳ್ವಾರರು ಶಾಸ್ತ್ರದಲ್ಲಿ ಹೇಳಿರುವಂತೆ, “ಬ್ರಾಹ್ಮೇ ಮುಹೂರ್ತೇ ಚ ಉತ್ಥಾಯ ” ಅರ್ಥಾತ್ ಒಬ್ಬ ವ್ಯಕ್ತಿಯು ಬ್ರಹ್ಮ ಮುಹೂರ್ತದಲ್ಲಿ ಏಳಬೇಕು (ಸುಮಾರು ಬೆಳಗಿನ ೪ ಗಂಟೆ), ಬೆಳಗಿನ ಜಾವ ಎದ್ದು ದಿವ್ಯ ಸ್ವಪ್ನವನ್ನು ನೆನೆಸಿಕೊಂಡು, ತಮ್ಮ ನಿತ್ಯಾನುಷ್ಠಾನಗಳನ್ನು ಮಾಡಿಕೊಳ್ಳುತ್ತಾರೆ ಮತ್ತು ಮದುರೆಯ ರಾಜನ ಅರಮನೆಗೆ ತೆರಳುತ್ತಾರೆ. ಅರಮನೆಯನ್ನು ತಲುಪಿದಾಗ, ರಾಜ ಮತ್ತು ಸೆಲ್ವ ನಂಬಿಗಳು ಬ್ರಾಹ್ಮಣೋತ್ತಮರಾದ ಆಳ್ವಾರರನ್ನು ಬರಮಾಡಿಕೊಳ್ಳುತ್ತಾರೆ ಮತ್ತು ಅವರಿಗೆ ನಮಸ್ಕರಿಸುತ್ತಾರೆ. ಆ ಪ್ರದೇಶದ ವಿದ್ವಾಂಸರು ಆಳ್ವಾರರು ಅಷ್ಟು ಪಂಡಿತರಲ್ಲವೆಂದು ರಾಜನಿಗೆ ತಿಳಿಸುತ್ತಾರೆ – ಆದರೆ ವಟಪತ್ರಶಾಯಿಗೆ ಆಳ್ವಾರರ ಸಮರ್ಪಣಾ ಭಾವ ಮತ್ತು ಕೈಂಕರ್ಯವನ್ನು ಈಗಾಗಲೇ ತಿಳಿದಿದ್ದ ಸೆಲ್ವ ನಂಬಿ ಮತ್ತು ರಾಜನು ಅವರಿಗೆ ಬಹು ಗೌರವವನ್ನು ಕೊಡುತ್ತಾರೆ ಮತ್ತು ವೇದಾಂತದ ಆಧಾರದ ಮೇಲೆ ಪರತತ್ತ್ವವನ್ನು ಪ್ರತಿಷ್ಠಾಪಿಸಲು ಕೇಳುತ್ತಾರೆ. ಎಂಪೆರುಮಾನನ ದಿವ್ಯ ಅನುಗ್ರಹದಿಂದ ಪೆರಿಯಾಳ್ವಾರರಿಗೆ ವೇದ, ವೇದಾಂತ, ಇತಿಹಾಸ, ಪುರಾಣ, ಇತ್ಯಾದಿಗಳ ಸಾರವನ್ನು ಚಿತ್ರೀಕರಿಸಿಕೊಳ್ಳಲು ಮತ್ತು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಹೇಗೆ ಶ್ರೀ ವಾಲ್ಮೀಕಿ ಭಗವಾನರಿಗೆ ಬ್ರಹ್ಮನ ಅನುಗ್ರಹದಿಂದ ಮಹತ್ತಾದ ತತ್ತ್ವಗಳನ್ನು ತಿಳಿದುಕೊಳ್ಳಲು ಸಾಧ್ಯವಾಯಿತೋ ಮತ್ತು ಹೇಗೆ ಎಂಪೆರುಮಾನನ ಪಾಂಚಜನ್ಯದ ಸ್ಪರ್ಶವಾದ ತಕ್ಷಣವೇ ಪ್ರಹ್ಲಾದಾಳ್ವಾನನಿಗೆ ಸರ್ವಜ್ಞನಾಗಲು ಸಾಧ್ಯವಾಯಿತೋ, ಹಾಗೆ ಪೆರಿಯಾಳ್ವಾರರು ಎಂಪೆರುಮಾನನ ನಿರ್ಹೇತುಕ ಕಾರುಣ್ಯದಿಂದಾಗಿ ಶ್ರೀಮನ್ನಾರಾಯಣನ ಪರತ್ವ (ಸಾರ್ವಭೌಮತ್ವ)ವೇ ಶಾಸ್ತ್ರಗಳ ಸಾರ ಎಂಬುದನ್ನು ಅರಿತುಕೊಂಡರು. ಇದನ್ನು ಪ್ರಮಾಣಗಳ ತಾರ್ಕಿಕ ಅನುಕ್ರಮದಲ್ಲಿ ಹೀಗೆ ನೋಡಬಹುದು:

ಸಮಸ್ತ ಶಬ್ದ ಮೂಲತ್ವಾತ್ ಆಕಾರಸ್ಯ ಸ್ವಭಾವತಃ
ಸಮಸ್ತ ವಾಚ್ಯ ಮೂಲತ್ವಾತ್ ಬ್ರಹ್ಮಣೋಪಿ ಸ್ವಭಾವತಃ
ವಾಚ್ಯವಾಚಕ ಸಂಬಂಧಸ್ ತಯೋರ್ ಅರ್ಥಾತ್ ಪ್ರದೀಯತೇ

ಎಲ್ಲ ಶಬ್ದಗಳೂ ಸ್ವಾಭಾವಿಕವಾಗಿ ಅಕಾರದಿಂದ ಉತ್ಪತ್ತಿಯಾಗುತ್ತವೆ. ಆ ಶಬ್ದಗಳ ಎಲ್ಲ ಅರ್ಥಗಳು (ಅಥವಾ ವಸ್ತುಗಳು) ಸ್ವಾಭಾವಿಕವಾಗಿ ಬ್ರಹ್ಮದಿಂದ ಉತ್ಪತ್ತಿಯಾಗುತ್ತವೆ. ಆದ್ದರಿಂದ ಅಕಾರ ಮತ್ತು ಬ್ರಹ್ಮಮ್ ಇವುಗಳ ನಡುವಿನ ಸಂಬಂಧವೂ ಕೂಡ ಸ್ವಾಭಾವಿಕವೆಂದು ಅರಿತುಕೊಳ್ಳಬಹುದು.

ಭಗವದ್ಗೀತೆಯಲ್ಲಿ ಸ್ವತಃ ಗೀತಾಚಾರ್ಯನೇ ಘೋಷಿಸಿರುವಂತೆ “ಅಕ್ಷರಾಣಾಮ್ ಅಕಾರೋಸ್ಮಿ” ಅರ್ಥಾತ್ ಅಕ್ಷರಗಳಲ್ಲಿ ನಾನು ಅಕಾರ.
ಹೀಗೆಯೂ ಹೇಳಲಾಗಿದೆ “ಅಕಾರೋ ವಿಷ್ಣುವಾಚಕ:” ಅರ್ಥಾತ್ ಆಕಾರವು ವಿಷ್ಣುವನ್ನು ಪ್ರತಿನಿಧಿಸುತ್ತದೆ, ಅದು ಶ್ರೀಮನ್ನಾರಾಯಣನು ಸಾರ್ವಭೌಮ ವ್ಯಕ್ತಿಯೆಂದು ದೃಢೀಕರಿಸುತ್ತದೆ.
ತೈತ್ತಿರೀಯ ಉಪನಿಷತ್ ಅಂತಹಾ ಶ್ರೀಮನ್ನಾರಾಯಣನ ಪ್ರಧಾನ ಗುಣಗಳನ್ನು ಹೀಗೆ ಗುರುತಿಸುತ್ತದೆ :
“ಯತೋ ವಾ ಇಮಾನಿ ಭೂತಾನಿ ಜಾಯಂತೇ, ಯೇನ ಜಾತಾನಿ ಜೀವಂತಿ, ಯತ್ ಪ್ರಯಂತಿ ಅಭಿಸಂವಿಶಂತಿ,
ತತ್ ವಿಜಿಜ್ಞಾಸಸ್ವ, ತತ್ ಬ್ರಹ್ಮೇತಿ”
“ಅದು ಯಾವುದರಿಂದ ಈ ಇಡೀ ಬ್ರಹ್ಮಾಂಡ ಮತ್ತು ಜೀವಿಗಳು ಸೃಷ್ಟಿಸಲ್ಪಡುತ್ತವೆಯೋ, ಈ ಇಡೀ ಬ್ರಹ್ಮಾಂಡಕ್ಕೆ ಯಾವುದು ಆಸರೆಯಾಗಿದೆಯೋ, ವಿನಾಶಕಾಲದಲ್ಲಿ ಯಾವುದರಲ್ಲಿ ಅದು ವಿಲೀನಗೊಳ್ಳುತ್ತದೆಯೋ, ಎಲ್ಲಿ ತಲುಪಿದಾಗ ಜೀವಿಗಳು ಮೋಕ್ಷವನ್ನು ಪಡೆಯುತ್ತವೆಯೋ, ಅದನ್ನು ಬ್ರಹ್ಮವೆಂದು ತಿಳಿಯಬೇಕು”.
ಹೀಗೆ ಜಗತ್ ಕಾರಣತ್ವ(ಬ್ರಹ್ಮಾಂಡ ಸೃಷ್ಟಿ ಕಾರಣಕರ್ತ), ಮುಮುಕ್ಷು ಉಪಾಸ್ಯತ್ವ (ಮೋಕ್ಷಾಭಿಲಾಷಿಗಳಿಂದ ಪೂಜಿಸಲ್ಪಡುವುದು), ಮತ್ತು ಮೋಕ್ಷ ಪ್ರದಾತ್ವ (ಒಬ್ಬ ಜೀವಾತ್ಮನಿಗೆ ಮೋಕ್ಷವನ್ನು ಕರುಣಿಸುವ ಅಧಿಕಾರ), ಇವುಗಳು ಸಾರ್ವಭೌಮ ವ್ಯಕ್ತಿಯ ಪ್ರಧಾನ ಗುಣಗಳೆಂದು ಗುರುತಿಸಲ್ಪಟ್ಟಿವೆ.
ಈ ಗುಣಗಳನ್ನು ಶ್ರೀಮನ್ನಾರಾಯಣನಲ್ಲಿ ಸಂಪೂರ್ಣವಾಗಿ ನೋಡಬಹುದು, ಈ ಕೆಳಗೆ ವಿವರಿಸಿರುವಂತೆ:
“ವಿಷ್ಣೋಸ್ಸಕಾಚಾದ್ಭೂತಂ ಜಗತ್ ತತ್ರೈವ ಚ ಸ್ಥಿತಂ
ಸ್ಥಿತಿ ಸಂಯಮಕರ್ತಾಸೌ ಜಗತೋಸ್ಯ ಜಗಚ್ಚ ಸ:”
ವಿಷ್ಣುಪುರಾಣದಲ್ಲಿ ಹೇಳಿರುವಂತೆ, “ಈ ಬ್ರಹ್ಮಾಂಡವು ವಿಷ್ಣುವಿನಿಂದ ಉತ್ಪತ್ತಿಯಾಗುತ್ತದೆ, ಪ್ರಳಯ ಕಾಲದಲ್ಲಿ ವಿಷ್ಣುವಿನಲ್ಲಿ ಅಡಗುತ್ತದೆ; ವಿಷ್ಣುವೇ ಅದನ್ನು ಪೋಷಿಸುವವನು ಮತ್ತು ಅಳಿಸುವವನು; ಇಡೀ ಬ್ರಹ್ಮಾಂಡವೇ ಅವನಿಗೆ ಶರೀರವಾಗಿದೆ ಕೂಡ”.

“ನಾರಾಯಣಾತ್ ಪರೋ ದೇವೋ ನ ಭೂತೋ ನ ಭವಿಷ್ಯತಿ
ಏತತ್ ರಹಸ್ಯಮ್ ವೇದಾನಾಮ್ ಪುರಾಣಾನಾಮ್ ಚ ಸಮ್ಮತಮ್”
ವರಾಹಪುರಾಣದಲ್ಲಿ ಹೇಳಿರುವಂತೆ “ನಾರಾಯಣನಿಗಿಂತ ಮೇಲೆ ಯಾರೂ ಹಿಂದೆ ಇರಲಿಲ್ಲ ಮುಂದೆಯೂ ಇರುವುದಿಲ್ಲ. ಇದು ವೇದಗಳ ಅತಿ ರಹಸ್ಯವಾದ ಸಂದೇಶ ಮತ್ತು ಪುರಾಣಗಳಲ್ಲಿ ಸಹ ಅಂಗೀಕೃತವಾಗಿದೆ”.

“ಸತ್ಯಂ ಸತ್ಯಂ ಪುನಸ್ಸತ್ಯಂ ಉಧೃತ್ಯ ಭುಜಮುಚ್ಯತೇ
ವೇದಶಾಸ್ತ್ರಾತ್ ಪರಂ ನಾಸ್ತಿ ನ ದೈವಂ ಕೇಶವಾತ್ ಪರಂ”
ನಾರದೀಯ ಪುರಾಣದಲ್ಲಿ ಹೇಳಿರುವಂತೆ “ನಾನು ಕೈಗಳನ್ನೆತ್ತಿ ಮೂರು ಬಾರಿ ಘೋಷಿಸುತ್ತೇನೆ (ಒತ್ತಿ ಹೇಳುತ್ತೇನೆ) ಕೇಶವನಿಗಿಂತ ಶ್ರೇಷ್ಠನಾದ ದೇವನಿಲ್ಲ ಮತ್ತು ವೇದಕ್ಕಿಂತ ಶ್ರೇಷ್ಠವಾದ ಶಾಸ್ತ್ರವಿಲ್ಲ”.

ಪೆರಿಯಾಳ್ವಾರರು ಈ ಮೇಲಿನ ಪ್ರಮಾಣಗಳು ಮತ್ತು ಸ್ಮೃತಿ, ಇತಿಹಾಸ, ಪುರಾಣ, ಇತ್ಯಾದಿಗಳಿಂದ ಇನ್ನೂ ಅನೇಕ ಪ್ರಮಾಣಗಳನ್ನು ನೀಡಿ ಶ್ರೀಮನ್ನಾರಾಯಣನ ಪರತ್ವವನ್ನು ಪ್ರತಿಷ್ಠಾಪಿಸಿದರು. ತಕ್ಷಣವೇ ಧನಕನಕಗಳಿಂದ ತುಂಬಿದ ಆ ಚೀಲವು (ವಿಜೇತರ ಬಹುಮಾನ) ದೈವ ಸಂಕಲ್ಪದಿಂದ ತಾನಾಗಿಯೇ ಸೂರಿನಿಂದ ಕೆಳಗೆ ಬರುತ್ತದೆ, ಮತ್ತು ಪೆರಿಯಾಳ್ವಾರರು ಅದನ್ನು ಕ್ಷಿಪ್ರವಾಗಿ ತೆಗೆದುಕೊಳ್ಳುತ್ತಾರೆ.
ಇದನ್ನು ನೋಡಿ ಪೆರಿಯಾಳ್ವಾರರನ್ನು ತಿರಸ್ಕರಿಸಿದ್ದ ವಿದ್ವಾಂಸರು, ರಾಜ ಮತ್ತು ಅಲ್ಲಿ ಸೇರಿದ್ದವರೆಲ್ಲರೂ ಅತೀವ ಸಂತೋಷಗೊಳ್ಳುತ್ತಾರೆ ಮತ್ತು ಅವರಿಗೆ ನಮಸ್ಕರಿಸುತ್ತಾರೆ.
ಅವರು ಪೆರಿಯಾಳ್ವಾರರು ವೇದಾಂತದ ಸಾರವನ್ನು ಶುದ್ಧವಾಗಿ ಸ್ಪಷ್ಟವಾಗಿ ಪ್ರಕಟಪಡಿಸಿದ್ದಾರೆಂದು ಘೋಷಿಸುತ್ತಾರೆ ಮತ್ತು ಬಹು ಪ್ರೀತಿಯಿಂದ ಉತ್ಸವದ ಆನೆಯ ಮೇಲೆ ಆಳ್ವಾರರಿಗೆ ಅದ್ದೂರಿಯ ಮೆರವಣಿಗೆಯನ್ನು ಏರ್ಪಡಿಸುತ್ತಾರೆ. ಪಕ್ಕದಲ್ಲಿ ಎಲ್ಲ ವಿದ್ವಾಂಸರು ಛತ್ರ ಚಾಮರಗಳನ್ನು ಹಿಡಿದು “ವೇದಗಳ ಸಾರವನ್ನು ಪ್ರಕಟಪಡಿಸಿದ ಅತಿ ವಿಶ್ವಾಸಾರ್ಹ ವ್ಯಕ್ತಿಯು ಆಗಮಿಸಿದ್ದಾರೆ, ಅವರಿಗೆ ಎಲ್ಲ ಯಶಸ್ಸುಗಳು ದೊರೆಯಲಿ” ಎಂದು ಸಾರುತ್ತಾರೆ. ರಾಜ ವಲ್ಲಭ ದೇವನು ಅವರಿಗೆ ಪಟ್ಟರ್ಪಿರಾನ್ (ಎಂದರೆ ಭಟ್ಟರು ಅಥವಾ ಮಹಾ ವಿದ್ವಾಂಸರುಗಳಿಗೆ ಅತ್ಯಮೂಲ್ಯವಾದ ಜ್ಞಾನವನ್ನು ಬಹಿರಂಗಗೊಳಿಸಿ ಉಪಕಾರ ಮಾಡಿದವರು) ಎಂಬ ಬಿರುದನ್ನಿಟ್ಟು ಗೌರವಿಸತ್ತಾನೆ. ರಾಜನು ಸಹ ಮೆರವಣಿಗೆಯಲ್ಲಿ ಸೇರುತ್ತಾನೆ ಮತ್ತು ಎಲ್ಲೆಡೆಯೂ ವೈಭವದ ಉತ್ಸವ ನಡೆಯುತ್ತದೆ.

pallandu

ಇದನ್ನು ನೋಡಿ ಪರಮಪದನಾಥನು, ಹೇಗೆ ಒಬ್ಬ ಮಾತಾಪಿತರು ಎಲ್ಲಿ ತಮ್ಮ ಮಕ್ಕಳು ಶ್ಲಾಘಿಸಲ್ಪಟ್ಟರೆ ಸಂತೋಷದಿಂದ ಭಾಗವಹಿಸಲು ಬಯಸುತ್ತಾರೋ ಹಾಗೆ ಆ ಮಹಾ ಉತ್ಸವದಲ್ಲಿ ಪಾಲುಗೊಳ್ಳಲು ಇಚ್ಛಿಸುತ್ತಾನೆ. ಶ್ರೀ ಮಹಾಲಕ್ಷ್ಮಿಯೊಂದಿಗೆ (ಶ್ರಿಯಃಪತಿತ್ವ – ಪಿರಾಟ್ಟಿಯ ಪತಿ ಎನ್ನುವುದು ಆತನ ಮುಖ್ಯವಾದ ಲಕ್ಷಣ) ಭವ್ಯವಾದ ಗರುಡಾಳ್ವಾನನ ಮೇಲೇರಿ ಪಾಂಚಜನ್ಯ ಮತ್ತು ಸುದರ್ಶನಾಳ್ವಾನರಿಂದ ಅಲಂಕೃತನಾದ ಎಂಪೆರುಮಾನನು ಆಕಾಶದಲ್ಲಿ ಆಗಮಿಸುತ್ತಾನೆ. ಆಳ್ವಾರರೊಂದಿಗಿರುವ ಆತನನ್ನು ನೋಡಲು ಈ ಭೌತಿಕ ಜಗತ್ತಿನ ಎಲ್ಲ ದೇವತೆಗಳು – ಬ್ರಹ್ಮ, ರುದ್ರ, ಇಂದ್ರ, ಇತ್ಯಾದಿ – ತಕ್ಷಣವೇ ತಮ್ಮ ಪರಿವಾರ ಮತ್ತು ಅಧೀನ ದೇವತೆಗಳೊಂದಿಗೆ ಆಗಮಿಸುತ್ತಾರೆ. ಆಳ್ವಾರರೊಂದಿಗಿರುವ ಆತನನ್ನು ನೋಡಲು ಈ ಭೌತಿಕ ಜಗತ್ತಿನ ಎಲ್ಲ ದೇವತೆಗಳು – ಬ್ರಹ್ಮ, ರುದ್ರ, ಇಂದ್ರ, ಇತ್ಯಾದಿ – ತಕ್ಷಣವೇ ತಮ್ಮ ಪರಿವಾರ ಮತ್ತು ಅಧೀನ ದೇವತೆಗಳೊಂದಿಗೆ ಆಗಮಿಸುತ್ತಾರೆ. ಪೆರಿಯಾಳ್ವಾರರು ಎಂಪೆರುಮಾನನಿಂದ ಅನುಗ್ರಹಿಸಲ್ಪಟ್ಟಿದ್ದರಿಂದ ಮತ್ತು ಶ್ರೀಮನ್ನಾರಾಯಣ ಮತ್ತು ಇತರರನ್ನು ವೀಕ್ಷಿಸಲು ಶಕ್ತರಾದ್ದರಿಂದ, ತಮಗೆ ನಡೆಯುತ್ತಿರುವ ಉತ್ಸವದ ಬಗ್ಗೆ ಮತ್ತು ಆತನ ಮತ್ತು ಇತರರ ಆಗಮನದ ಬಗ್ಗೆ ಹೆಮ್ಮೆ ಪಡದೆ, ತಕ್ಷಣವೇ ಈ ಭೌತಿಕ ಜಗತ್ತಿನಲ್ಲಿ ಎಂಪೆರುಮಾನನ ಉಪಸ್ಥಿತಿಯನ್ನು ಕಂಡು ಆತಂಕಗೊಳ್ಳುತ್ತಾರೆ. ದಿವ್ಯಜ್ಞಾನದಿಂದ ಅನುಗ್ರಹಿಸಲ್ಪಟ್ಟ ಅವರು, ಶ್ರೀಮನ್ನಾರಾಯಣನು ಸರ್ವಜ್ಞ, ಸರ್ವಶಕ್ತ, ಇತ್ಯಾದಿ ಮತ್ತು ಯಾರಿಂದಲೂ ಪರಾಜಯಗೊಳಿಸಲಾಗದವನು ಎಂಬುದನ್ನು ಅರಿತಿದ್ದರೂ ಸಹ, ಎಂಪೆರುಮಾನನ ಕುರಿತು ಅತೀವ ಪ್ರೇಮದಿಂದಾಗಿ ಎಂಪೆರುಮಾನನ ಮೃದು ಮತ್ತು ನಾಜೂಕಾದ ಸ್ವಭಾವದ ಬಗ್ಗೆ ಚಿಂತಿಸಲು ಆರಂಭಿಸುತ್ತಾರೆ. ಶಾಸ್ತ್ರಗಳಲ್ಲಿ ಹೇಳಿರುವುದೇನೆಂದರೆ ಎಂಪೆರುಮಾನನ ದಿವ್ಯ ಮಂಗಳವಿಗ್ರಹವು ಪಂಚ ಉಪನಿಷದ್ ಗಳಿಂದ ರಚಿತವಾಗಿದೆ ಮತ್ತು ನಿಯತವಾಗಿ ನಿತ್ಯಸೂರಿಗಳಿಂದ ಪರಮಪದದಲ್ಲಿ ಆನಂದಿಸಲ್ಪಡುತ್ತದೆ, ಯಾವುದು ಮಹರ್ಷಿಗಳು, ಮತ್ತು ಈ ಲೋಕದ ದೇವತೆಗಳಾದ ಬ್ರಹ್ಮ, ರುದ್ರ, ಇತರರಿಗೆ ಸಹ ತಲುಪಲು ಸಾಧ್ಯವಿಲ್ಲವೋ ಅದು, ಇನ್ನು ಅಸುರರು/ರಾಕ್ಷಸರ ಬಗ್ಗೆ ಹೇಳುವುದೇನಿದೆ. ಆದರೆ ಆತನು ಆ ದಿವ್ಯವಾದ ನೆಲೆಯನ್ನು ತೊರೆದು ಈ ಭೌತಿಕ ಪ್ರಪಂಚಕ್ಕೆ ಪ್ರವೇಶಿಸಿದ್ದಾನೆ, ಯಾವುದು ಅಜ್ಞಾನಿಗಳು ಮತ್ತು ರಾಕ್ಷಸೀಯ ಜನರಿಂದ ತುಂಬಿದೆಯೋ ಮತ್ತು ಈ ಯುಗದಲ್ಲಿ ಕಲಿಯ ಆಳ್ವಿಕೆಯಲ್ಲಿದೆಯೋ ಅದು. ಆಳ್ವಾರರು ಹೀಗೆ ಯೋಚಿಸುತ್ತಾರೆ “ಎಂಪೆರುಮಾನನು ಇಲ್ಲಿ ಆಗಮಿಸಿದ್ದಾನೆ, ಮತ್ತು ಆತನು ದೃಷ್ಟಿಗೆ ಒಳಗಾಗಬಹುದು, ಆದ್ದರಿಂದ ನಾವು ಈಗ ಆತನ ಕ್ಷೇಮಕ್ಕೆ ಪ್ರಾರ್ಥಿಸೋಣ” ಮತ್ತು ತಾವು ಕುಳಿತ ಆನೆಯ ಕೊರಳಿನಿಂದ ಗಂಟೆಯನ್ನು ಎತ್ತಿಕೊಂಡು ತಕ್ಷಣವೇ ತಿರುಪ್ಪಲ್ಲಾಂಡು ಹಾಡಲು ಪ್ರಾರಂಭಿಸುತ್ತಾರೆ. ಪರಾವಲಂಬಿಯಾದ ತಮ್ಮ ಸ್ವಂತ ಸ್ವರೂಪವನ್ನು ಮತ್ತು ಸ್ವತಂತ್ರನಾದ ಮತ್ತು ಶಕ್ತನಾದ ಎಂಪೆರುಮಾನನ ಸ್ವರೂಪವನ್ನು ಮರೆತು, ಆಳ್ವಾರರು ಅತೀವ ಪ್ರೀತಿಯಿಂದ ಎಲ್ಲರನ್ನೂ (ಐಶ್ವರ್ಯಾರ್ಥಿ – ಸಂಪತ್ತನ್ನು ಬಯಸುವವನು, ಕೈವಲ್ಯಾರ್ಥಿ – ಆತ್ಮಾನುಭವವನ್ನು ಬಯಸುವವನು, ಭಗವತ್ ಚರಣಾರ್ಥಿ – ಎಂಪೆರುಮಾನನಿಗೆ ನಿರಂತರ ಕೈಂಕರ್ಯವನ್ನು ಮಾಡಲು ಬಯಸುವವನು) ತಮ್ಮೊಂದಿಗೆ ಆಹ್ವಾನಿಸುತ್ತಾರೆ ಮತ್ತು ತಿರುಪ್ಪಲ್ಲಾಂಡು ಹಾಡುತ್ತಾರೆ. ನಂತರ ಉತ್ಸವಗಳು ಮುಗಿದ ಮೇಲೆ ಶ್ರೀಮನ್ನಾರಾಯಣನು ಸಂತೋಷದಿಂದ ತನ್ನ ನೆಲೆಗೆ ಹಿಂತಿರುಗುತ್ತಾನೆ.

ತರುವಾಯ ಪೆರಿಯಾಳ್ವಾರರು ರಾಜನನ್ನು ಆಶೀರ್ವದಿಸುತ್ತಾರೆ ಮತ್ತು ರಾಜನಿಂದ ಬಹುವಾಗಿ ಗೌರವಿಸಲ್ಪಡುತ್ತಾರೆ.
ಮತ್ತೆ ವಟಪತ್ರಶಾಯಿಯ ಸೇವೆ ಮಾಡುವ ಬಯಕೆಯಿಂದ ಆಳ್ವಾರರು ಶ್ರೀವಿಲ್ಲಿಪುತ್ತೂರ್ ಗೆ ಹಿಂದಿರುಗುತ್ತಾರೆ, ಮತ್ತು ರಾಜನು ಕೊಟ್ಟ ಎಲ್ಲ ಸಂಪತ್ತನ್ನೂ ಅಲ್ಲಿನ ಎಂಪೆರುಮಾನನಿಗೆ ಸಮರ್ಪಿಸುತ್ತಾರೆ. ಮನುಸ್ಮೃತಿಯಲ್ಲಿ ಹೀಗೆ ಹೇಳಿದೆ:

ತ್ರಯಾ ಏವಾಧನಾ ರಾಜನ್ ಭಾರ್ಯಾ ದಾಸಸ್ ತಥಾ ಸೂತ:
ಯತ್ತೇ ಸಮಧಿಗಚ್ಛಂತಿ ಯಸ್ಯೈತೇ ತಸ್ಯ ತದ್ಧನಮ್

ಮಡದಿ, ಸೇವಕ, ಮಗ ಇವರು ಯಾವುದನ್ನೂ ಪಡೆಯುವುದಿಲ್ಲ. ಅವರು ಗಳಿಸಿದ್ದೆಲ್ಲವೂ ಅವರವರ ಒಡೆಯರಿಗೆ ಸೇರುತ್ತದೆ (ಪತಿ, ಯಜಮಾನ ಮತ್ತು ತಂದೆ).

ಅದೇ ರೀತಿ ಪೆರಿಯಾಳ್ವಾರರೂ ಸಹ ತಮ್ಮ ಒಡೆಯನಾದ ವಟಪತ್ರಶಾಯಿಗೆ ಸಮರ್ಪಿಸುತ್ತಾರೆ ಮತ್ತು ಆತನಿಗೆ ಹೇಳುತ್ತಾರೆ “ಇದೆಲ್ಲವನ್ನೂ ನಿನ್ನ ಅನುಗ್ರಹದಿಂದ ಪಡೆದಿದ್ದರಿಂದ ಇದೆಲ್ಲವೂ ನಿನಗೆ ಮಾತ್ರ ಸೇರಬೇಕು”. ತರುವಾಯ ಅವರು ತಮ್ಮ ವಾಡಿಕೆಯ ಕೈಂಕರ್ಯಕ್ಕೆ ಹಿಂತಿರುಗುತ್ತಾರೆ, ಅದೆಂದರೆ ವಿಧವಿಧವಾದ ಹೊಸ ಹೂಮಾಲೆಗಳನ್ನು ಬಹು ಪ್ರೀತಿಯಿಂದ ಕಟ್ಟಿ ವಟಪತ್ರಶಾಯಿಗೆ ಅವುಗಳನ್ನು ಸಮರ್ಪಿಸುವುದು, ಹೇಗೆ ಶ್ರೀ ಮಾಲಾಕಾರನು ಕೃಷ್ಣನಿಗೆ ಅರ್ಪಿಸಿ ಅವನನ್ನು ವೈಭವೀಕರಿಸಿದನೋ ಹಾಗೆ. ಕಣ್ಣನ್ ಎಂಪೆರುಮಾನನ ಚರಿತ್ರೆಗೆ ಅತಿ ಬಾಂಧವ್ಯವನ್ನು ಬೆಳೆಸಿಕೊಂಡು, ಆತನ ಜನನದಿಂದ ದಿವ್ಯ ಲೀಲೆಗಳವರೆಗೆ, ಅವರು ಯಶೋದೆಯ ಭಾವವನ್ನು ಹೊಂದುತ್ತಾರೆ ಮತ್ತು ಅವನ ಸೌಶೀಲ್ಯ (ಉದಾರತೆ) ಮತ್ತು ಸೌಲಭ್ಯ (ಸರಳವಾಗಿ ಪಡೆಯಬಲ್ಲುದು) ವನ್ನು ಬಹುವಾಗಿ ಸವಿಯುತ್ತಾರೆ. ಅಂತಹಾ ಉಕ್ಕಿಹರಿಯುವ ಭಾವನೆಗಳು ಅವರು ದಿವ್ಯಪ್ರಬಂಧ ಪೆರಿಯಾಳ್ವಾರ್ ತಿರುಮೊಳಿಯನ್ನು ಪ್ರಕಟಪಡಿಸುವುದರಲ್ಲಿ ಪರಿಣಮಿಸುತ್ತವೆ. ಅನವರತವೂ ಶ್ರಿಯಪತಿಯನ್ನೇ ಧ್ಯಾನಿಸುತ್ತಾ ತಮಗೆ ಶರಣಾಗತರಾದ ಶಿಷ್ಯರು ಮತ್ತು ಅಭಿಮಾನಿಗಳನ್ನು ಅವರು ಪೋಷಿಸಿ ಉದ್ಧರಿಸುತ್ತಾರೆ ಮತ್ತು ಲೋಕದ ಎಲ್ಲರನ್ನೂ ಹರಸುತ್ತಾರೆ.

ಇದು ಇನ್ನೂ ಮುಗಿದಿಲ್ಲ, ಅವರ ದಿವ್ಯ ಚರಿತ್ರೆಯು ಮುಂದೆ ಆಂಡಾಳ್ ಚರಿತ್ರೆಯಲ್ಲಿ ವಿವರಿಸಲ್ಪಟ್ಟಿದೆ.

ಅವರ ತನಿಯನ್:
ಗುರುಮುಖಮ್ ಅನಧೀತ್ಯ ಪ್ರಾಹ ವೇದಾನಶೇಷಾನ್
ನರಪತಿ ಪರಿಕ್ಲುಪ್ತಮ್ ಶುಲ್ಕಮ್ ಆದಾತುಕಾಮ: ।
ಶ್ವಶುರಮ್ ಅಮರವಂದ್ಯಮ್ ರಂಗನಾಥಸ್ಯ ಸಾಕ್ಷಾತ್
ದ್ವಿಜಕುಲತಿಲಕಮ್ ತಮ್ ವಿಷ್ಣುಚಿತ್ತಮ್ ನಮಾಮಿ ।।

ಅವರ ಅರ್ಚಾವತಾರ ಅನುಭವವನ್ನು ಇಲ್ಲಿ ಈಗಾಗಲೇ ಚರ್ಚಿಸಲಾಗಿದೆ:
http://ponnadi.blogspot.in/2012/10/archavathara-anubhavam-periyazhwar.html

ಅಡಿಯೇನ್ ಪಾರ್ಥಸಾರಥಿ ರಾಮಾನುಜ ದಾಸನ್

ಮೂಲ: http://guruparamparai.koyil.org/2013/01/20/periyazhwar/

ರಕ್ಷಿತ ಮಾಹಿತಿ:  https://guruparamparai.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

1 thought on “ಪೆರಿಯಾಳ್ವಾರ್”

Leave a Comment