ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:
ತಿರುನಕ್ಷತ್ರಮ್: ಮಾಶಿ, ಪುನರ್ಪೂಸಮ್
ಅವತಾರ ಸ್ಥಲ: ತಿರುವಂಜಿಕ್ಕಳಮ್
ಆಚಾರ್ಯನ್: ವಿಶ್ವಕ್ಸೇನರ್
ಕೃತಿಗಳು: ಮುಕುಂದ ಮಾಲೈ, ಪೆರುಮಾಳ್ ತಿರುಮೊಳಿ
ಪರಮಪದಕ್ಕೆ ಸೇರಿದ ಸ್ಥಳ: ಮನ್ನಾರ್ ಕೋಯಿಲ್ (ತಿರುನೆಲ್ವೇಲಿ ಹತ್ತಿರ)
ಕುಲಶೇಖರ ಆಳ್ವಾರರ ಹಿರಿಮೆ ಏನೆಂದರೆ ಅವರು ವಾಸ್ತವವಾಗಿ ಕ್ಷತ್ರಿಯ ಕುಲದಲ್ಲಿ (ಮಹಾ ಗರ್ವ ಉಂಟುಮಾಡಬಲ್ಲ ಕುಲ) ಜನಿಸಿದ್ದರೂ ಅವರು ಎಂಬೆರುಮಾನ್ ಮತ್ತು ಭಕ್ತರ ಕುರಿತು ಅತಿ ವಿನಮ್ರ ಭಾವನೆಯನ್ನು ಹೊಂದಿದ್ದರು. ಪೆರುಮಾಳ್ (ಶ್ರೀರಾಮ) ಕುರಿತು ಅವರ ಈ ಅಪಾರ ಭಕ್ತಿ ಮತ್ತು ಬಾಂಧವ್ಯದಿಂದಾಗಿ ಅವರು ಕುಲಶೇಖರ ಪೆರುಮಾಳ್ ಎಂದೇ ಹೆಸರುವಾಸಿಯಾದರು. ಅವರು ತಮ್ಮ ಪೆರುಮಾಳ್ ತಿರುಮೊಳಿಯಲ್ಲಿ, ಮೊದಲನೆಯ ಪದಿಗಂ(ಇರುಳಿಯಚ್ಚುಡರ್ ಮನಿಗಳ್) ನಲ್ಲಿ ಪೆರಿಯ ಪೆರುಮಾಳರಿಗೆ ಮಂಗಳಾಶಾಸನ ಮಾಡಿದ ನಂತರ, ಒಡನೆಯೇ ಎರಡನೆಯ ಪದಿಗಂ(ತೇಟ್ಟರುಮ್ ತಿರಲ್ ತೇನ್) ನಲ್ಲಿ ಅವರು ಶ್ರೀವೈಷ್ಣವರುಗಳನ್ನು ವೈಭವೀಕರಿಸುತ್ತಾರೆ. ಮತ್ತು ಅವರು ಶ್ರೀವೈಷ್ಣವರೊಡನೆ ಅತಿ ಬಾಂಧವ್ಯದಿಂದ ಜನಪ್ರಿಯರಾಗಿದ್ದಾರೆ. ಇದನ್ನು ನಾವು ಮುಂದಿನ ಭಾಗಗಳಲ್ಲಿ ಅವರ ಚರಿತ್ರೆಯಲ್ಲಿ ನೋಡಬಹುದು.
ಅವರು ತಮ್ಮ ಪೆರಿಯ ತಿರುಮೊಳಿಯಲ್ಲಿ ಜೀವಾತ್ಮನ ನಿಜವಾದ ಸ್ವರೂಪವು ಶೇಷತ್ವವೆಂದು ಸ್ವತ: ಕಡೆಯಲ್ಲಿ(10.7) ಹೀಗೆ ಘೋಷಿಸುತ್ತಾರೆ: “ತಿಲ್ಲೈಣಗರ್ ಚಿತ್ತಿರಕೂಡಮ್ ತನ್ನುಳ್ ಅರಚಮರ್ಣ್ತಾನ್ ಅಡಿಚೂಡುಮ್ ಅರಚೈ ಅಲ್ಲಾಲ್ ಅರಚಾಗ ಎಣ್ಣೇನ್ ಮಟ್ರರಚು ತಾನೇ”
ಅರ್ಥಾತ್ “ನಾನು ತಿರುಚಿತ್ರಕೂಟದ ರಾಜ(ಗೋವಿಂದರಾಜನ್ ಎಮ್ಪೆರುಮಾನ್)ನ ಪಾದಾರವಿಂದವನ್ನು ಹಿಡಿದುಕೊಳ್ಳುವುದರ ಹೊರತು ಬೇರಾವುದನ್ನೂ ರಾಜತ್ವವೆಂದು ಪರಿಗಣಿಸುವುದಿಲ್ಲ”. ಈ ಹೇಳಿಕೆಯಿಂದ ಅವರು ಜೀವಾತ್ಮನ ದೇವತಾಂತರ/ವಿಷಯಾಂತರ ಸಂಬಂಧದ ಯೋಚನೆಯನ್ನು ಸ್ಪಷ್ಟವಾಗಿ ತೊಡೆದುಹಾಕುತ್ತಾರೆ.
ಅವರು ತಮ್ಮ ತಿರುವೇಂಕಟ ಪದಿಗಮ್ ನಲ್ಲಿ ಜೀವಾತ್ಮನ ಅಂತಿಮ ಸ್ವರೂಪವನ್ನು “ಅಚಿತ್ವತ್ ಪಾರತಂತ್ರ್ಯಮ್” ಎಂದೂ ಘೋಷಿಸುತ್ತಾರೆ.
4.9 ರಲ್ಲಿ ಹೀಗೆ ವಿವರಿಸುತ್ತಾರೆ:
ಚೆಡಿಯಾಯ ವಲ್ವಿನೈಗಳ್ ತೀರ್ಕ್ಕುಮ್ ತಿರುಮಾಲೇ
ನೆಡಿಯಾನೇ ವೇಙ್ಕಟವಾ! ನಿನ್ ಕೋಯಿಲಿನ್ ವಾಶಲ್
ಅಡಿಯಾರುಮ್ ವಾನವರುಮ್ ಅರಮ್ಬೈಯರುಮ್ ಕಿಡಣ್ತಿಯಙ್ಗುಮ್
ಪಡಿಯಾಯ್ಕ್ಕಿಡಣ್ತು ಉನ್ ಪವಳ ವಾಯ್ಕಾಣ್ಬೇನೇ
ಓಹ್ ಶ್ರೀವೇಂಕಟೇಶ! ನೀನೊಬ್ಬನೇ ನನ್ನ ಪ್ರಬಲವಾದ ಕರ್ಮಗಳನ್ನು ನಿರ್ಮೂಲಗೊಳಿಸಬಲ್ಲವನು. ಎಲ್ಲಿ ನಿನ್ನ ಮಹಾ ಭಕ್ತರು, ದೇವತೆಗಳು ಭೌತಿಕ ಲಾಭವನ್ನು ಅಪೇಕ್ಷಿಸುವವರು ಮತ್ತು ಅವರನ್ನು ಅವಲಂಬಿಸಿರುವವರು ನಿನ್ನ ದರ್ಶನಕ್ಕಾಗಿ ಹಾತೊರೆಯುತ್ತಾರೋ, ಆ ನಿನ್ನ ಸನ್ನಿದಿಯ ಪ್ರವೇಶದ್ವಾರದಲ್ಲಿ ನಾನು ಒಂದು ಮೆಟ್ಟಿಲಾಗಿರಲು ಬಯಸುತ್ತೇನೆ.
ಪೆರಿಯವಾಚಾನ್ ಪಿಳ್ಳೈ ಜೀವಾತ್ಮಾ ಈ ಎರಡೂ ವಿಧವಾಗಿರಬೇಕೆಂದು ವಿವರಿಸುತ್ತಾರೆ:
– (ಪಡಿಯಾಯ್ಕ್ಕಿಡನ್ತು) ಅಚಿತ್(ಅಚೇತನ) ಅರ್ಥಾತ್ ಎಂಬೆರುಮಾನ್ ಜೀವಾತ್ಮನ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿರಬೇಕು, ಹೇಗೆ ಚಂದನ(ಶ್ರೀಗಂಧ), ಕುಸುಮ(ಹೂವು), ಇತ್ಯಾದಿಗಳು ಯಾವ ಸ್ವಂತ ಆಸಕ್ತಿಯೂ ಇಲ್ಲದೆ ತಮ್ಮ ಉಪಭೋಗಿಗಳ ಸಂತೋಷಕ್ಕಾಗಿ ಮಾತ್ರ ಇರುವವೋ ಹಾಗೆ.
– (ಉನ್ ಪವಳ ವಾಯ್ಕಾಣ್ಬೇನೇ) ಚಿತ್(ಸಚೇತನ) ಅರ್ಥಾತ್ ನಾವು ಎಂಬೆರುಮಾನನ್ನು ನಮ್ಮ ಸೇವೆಯನ್ನು ಸ್ವೀಕರಿಸಿ ಸಂತುಷ್ಟನಾಗಿದ್ದಾನೆಂದು ಗುರುತಿಸಿಕೊಳ್ಳಬೇಕು. ಹೀಗೆ ಗುರುತಿಸಿಕೊಂಡು ಪ್ಪ್ರತಿಸ್ಪಂದಿಸದಿದ್ದರೆ ನಾವು ಅಚೇತನಕ್ಕಿಂತ ಬೇರೆಯಲ್ಲ.
ಈ ತತ್ವವನ್ನು “ಅಚಿತ್ವತ್ ಪಾರತಂತ್ರ್ಯಮ್” ಎನ್ನಲಾಗಿದೆ, ಅರ್ಥಾತ್ ಜೀವಾತ್ಮನು ಎಂಬೆರುಮಾನನ ಸಂಪೂರ್ಣ ನಿಯಂತ್ರಣಕ್ಕೊಳಪಟ್ಟಿದ್ದಾನೆ ಮತ್ತು ಎಂಬೆರುಮಾನನಿಗೆ ಇನ್ನೂ ಪ್ಪ್ರತಿಸ್ಪಂದಿಸುತ್ತಿದ್ದಾನೆ – ಇದು ನಮ್ಮ ಶ್ರೀವೈಷ್ಣವ ಸಿದ್ಧಾಂತದ ಮಹತ್ತಮವಾದ ತತ್ವ.
ನಾವು ಈಗಾಗಲೇ ಮಾಮುನಿಗಳು ತಮ್ಮ ‘ಅರ್ಚಾವತಾರ ಅನುಭವಮ್’ ಲೇಖನದಲ್ಲಿ ಹೇಗೆ ಕುಲಶೇಖರ ಆಳ್ವಾರರನ್ನು ವೈಭವೀಕರಿಸಿದ್ದಾರೆಂದು ನೋಡಿ ಆನಂದಿಸಿದ್ದೇವೆ – http://ponnadi.blogspot.in/2012/10/archavathara-anubhavam-kulasekara.html.
ನಾಯನಾರರು ತಮ್ಮ ಮೇರು ಕೃತಿ ‘ಆಚಾರ್ಯ ಹೃದಯಂ’ ನಲ್ಲಿ ಯಾರೂ ಭಕ್ತರಲ್ಲಿ ಅವರ ಜನನದ ಆಧಾರದ ಮೇಲೆ ಭೇದಭಾವವನ್ನು ಮಾಡಬಾರದು ಎಂದು ಒಂದು ಚೂರ್ಣಿಕೆಗಳ ಸರಣಿಯಲ್ಲಿ ವಿವರಿಸಿದ್ದಾರೆ ಮತ್ತು ಕಡೆಯಲ್ಲಿ ನಮ್ಮಾಳ್ವಾರ್ ಹಾಗೂ ಇತರ ಶ್ರೇಷ್ಠ ವ್ಯಕ್ತಿಗಳ ಹಿರಿಮೆಯನ್ನು ಸ್ಥಾಪಿಸಿದ್ದಾರೆ. ಆ ಭಾಗದಲ್ಲಿ, ಯಾವ ಜನ್ಮವು ಭಾಗವತ ಕೈಂಕರ್ಯಕ್ಕೆ ಉತ್ತಮವಾಗಿ ಸಹಾಯಕವಾಗಿದೆ ಎಂದು ವಿವರಿಸುತ್ತಾ, ನಾಯನಾರರು ಹೇಗೆ ಅನೇಕ ಶ್ರೇಷ್ಠ ವ್ಯಕ್ತಿಗಳು ಭಾಗವತ ಕೈಂಕರ್ಯಕ್ಕೆ ಸಹಾಯಕವಾಗಲೆಂದೇ ಹೀನವೆಂದು ಕರೆಯಲ್ಪಡುವ ಕುಲಗಳಲ್ಲಿ ಜನಿಸಲು ಬಯಸಿದರು ಎಂದು ಉದಾಹರಣೆ ನೀಡುತ್ತಾರೆ. ಈಗ ನಾವು 87ನೇ ಚೂರ್ಣಿಕೆಯ ಸಾರವನ್ನು ಮತ್ತು ಅದು ಹೇಗೆ ಕುಲಶೇಖರ ಆಳ್ವಾರರಿಗೆ ಸಂಬಂಧಿಸಿದೆ ಎಂಬುದನ್ನು ನೋಡೋಣ.
ಅಣೈಯ ಊರ ಪುನೈಯ ಅಡಿಯುಮ್ ಪೊಡಿಯುಮ್ ಪಡಪ್ಪರ್ವತ ಭವನಙ್ಗಳಿಲೇ ಏತೇನುಮಾಗ ಜಣಿಕ್ಕಪ್ಪೆರುಗಿರ ತಿರ್ಯಕ್ ಸ್ಥಾವರ ಜಂಗಮಂಗಳೈ ಪೆರುಮಕ್ಕಳುಮ್ ಪೆರಿಯೋರುಮ್ ಪರಿಗ್ರಹಿತ್ತು ಪ್ಪ್ರಾರ್ಥಿಪ್ಪರ್ಗಳ್.
ನಿತ್ಯಸೂರಿಗಳಾದ ಅನಂತ, ಗರುಡ, ಇತರರು ಹಾಸಿಗೆ(ಆದಿಶೇಷ), ಪಕ್ಷಿ(ಗರುಡಾಳ್ವಾರ್), ಇತ್ಯಾದಿಗಳಾಗಿ ಜನಿಸಲು ಬಯಸುತ್ತಾರೆ. ನಮ್ಮಾಳ್ವಾರರು ಎಂಬೆರುಮಾನನಿಗೆ ತಿರುತ್ತುಳಾಯಿ(ತುಳಸಿ) ಯು ಎಷ್ಟು ಪ್ರಿಯವಾಗಿದೆಯೆಂದರೆ ಅದನ್ನು ಎಲ್ಲೆಡೆಯೂ ಧರಿಸುತ್ತಾನೆ (ತಲೆ, ಭುಜಗಳು, ಎದೆ, ಇತ್ಯಾದಿ) ಎಂದು ಗುರುತಿಸಿದ್ದಾರೆ. ಮಹಾ ಋಷಿಗಳಾದ ಪರಾಶರ, ವ್ಯಾಸ, ಶುಕ, ಮತ್ತಿತರರು ಕೃಷ್ಣ ಮತ್ತು ಗೋಪಿಕೆಯರ ಪಾದ ಕಮಲಗಳಿಂದ ಸ್ಪರ್ಶಿಸಲ್ಪಡುವ ವೃಂದಾವನದ ಧೂಳಾಗಿ ಜನಿಸಲು ಬಯಸಿದರು. ಕುಲಶೇಖರ ಆಳ್ವಾರರು ತಿರುವೇಂಕಟಗಿರಿಯಲ್ಲಿ ಏನೊಂದಾಗಿಯಾದರೂ ಜನಿಸಲು ಬಯಸಿದರು. ಆಳವಂದಾರರು ಒಬ್ಬ ಶ್ರೀವೈಷ್ಣವರ ಮನೆಯಲ್ಲಿ ಒಂದು ಹುಳುವಾಗಿ ಜನಿಸಲು ಬಯಸಿದರು. ಈಗ ನಾವು ಕುಲಶೇಖರ ಆಳ್ವಾರರ ಬಯಕೆಯನ್ನು ಮಾಮುನಿಗಳ ಈ ಚೂರ್ಣಿಕೆಯ ವ್ಯಾಖ್ಯಾನದಲ್ಲಿ ಸ್ವಲ್ಪ ವಿವರವಾಗಿ ತಿಳಿದುಕೊಳ್ಳೋಣ.
ಪೆರುಮಾಳ್ ತಿರುಮೊಳಿಯ 4ನೆಯ ಪದಿಗಂ(ಭಾಗ)ನಲ್ಲಿ ಆಳ್ವಾರರು ತಿರುವೇಂಕಟಗಿರಿಯ ಜೊತೆ ಯಾವುದಾದರೂ ಒಂದು ನಿರಂತರ ಸಂಬಂಧವನ್ನು ಇಟ್ಟುಕೋಳ್ಳಲು ಬಯಸುತ್ತಾರೆ – ಅವರು ಸದಾಕಾಲವೂ ತಿರುವೇಂಕಟಗಿರಿಯೊಂದಿಗೆ ಸಂಪರ್ಕವನ್ನು ಇಟ್ಟುಕೊಳ್ಳಲು ಇಚ್ಛಿಸುತ್ತಾರೆ.
ಅವರು ಹೀಗೆ ಬಯಸುತ್ತಾರೆ:
– ಬೆಟ್ಟದ ಮೇಲಿನ ಕೊಳದಲ್ಲಿ ಒಂದು ಹಕ್ಕಿಯಾಗಿ
– ಕೊಳದಲ್ಲಿ ಒಂದು ಮೀನಾಗಿ, ಏಕೆಂದರೆ ಹಕ್ಕಿ ಹಾರಿ ಹೋಗಬಹುದು
– ಎಂಬೆರುಮಾನನಿಗೆ ಸೇವೆ ಮಾಡಲು ಒಂದು ಚಿನ್ನದ ಪಾತ್ರೆಯನ್ನು ಹಿಡಿದುಕೊಂಡವನಾಗಿ, ಏಕೆಂದರೆ ಮೀನು ಈಜಿಕೊಂಡು ಹೋಗಿಬಿಡಬಹುದು
– ಒಂದು ಮರದಲ್ಲಿ ಒಂದು ಹೂವಾಗಿ, ಏಕೆಂದರೆ ಚಿನ್ನದ ಪಾತ್ರೆಯನ್ನು ಹಿಡಿದುಕೊಳ್ಳುವುದರಿಂದ ಅದು ನನ್ನ ಮನಸ್ಸಿನಲ್ಲಿ ಅಹಂಕಾರವನ್ನು ಹುಟ್ಟಿಸಬಹುದು ಮತ್ತು ಅದರಿಂದಾಗಿ ನನ್ನನ್ನು ದೂರ ಎಳೆಯಬಹುದು.
– ಒಂದು ನಿರುಪಯುಕ್ತವಾದ ಮರವಾಗಿ, ಏಕೆಂದರೆ ಹೂವನ್ನು ಬಳಸಿದ ನಂತರ ಅದನ್ನು ಎಸೆದುಬಿಡಬಹುದು
– ತಿರುವೇಂಕಟಗಿರಿಯಲ್ಲಿ ಒಂದು ನದಿಯಾಗಿ, ಏಕೆಂದರೆ ನಿರುಪಯುಕ್ತವಾದ ಮರವನ್ನು ಎಂದಾದರೊಂದು ದಿನ ಕಿತ್ತುಹಾಕಿಬಿಡಬಹುದು
– ಸನ್ನಿಧಿಗೆ ಹೋಗುವ ದಾರಿಯಲ್ಲಿ ಮೆಟ್ಟಿಲುಗಳಾಗಿ, ಏಕೆಂದರೆ ನದಿಯು ಎಂದಾದರೊಂದು ದಿನ ಬತ್ತಿಹೋಗಬಹುದು
– ಸನ್ನಿಧಿಯ ಮುಂದೆ ಕಲ್ಲಿನ ಸೋಪಾನವಾಗಿ (ಇದರಿಂದಾಗಿ ಅದಕ್ಕೆ ಕುಲಶೇಖರ ಪಡಿ ಎಂದು ಹೆಸರಾಯಿತು), ಏಕೆಂದರೆ ಮೆಟ್ಟಿಲುಗಳ ದಾರಿಯನ್ನು ಎಂದಾದರೊಂದು ದಿನ ಬದಲಿಸಬಹುದು
– ತಿರುವೇಂಕಟದಲ್ಲಿ ನಿರಂತರವಾಗಿರುವ ಯಾವುದಾದರೊಂದು ವಸ್ತುವಾಗಿ
– ಪೆರಿಯವಾಚಾನ್ ಪಿಳ್ಳೈ ತಮ್ಮ ವ್ಯಾಖ್ಯಾನದಲ್ಲಿ ಹೀಗೆ ವಿವರಿಸಿದ್ದಾರೆ ಆಳ್ವಾರರು ತಿರುಮಲೆಯೊಂದಿಗೆ ನಿರಂತರ ಸಂಪರ್ಕವನ್ನು ಹೊಂದುವುದಕ್ಕಾಗಿ ಸ್ವತ: ತಿರುವೇಂಕಟಮುಡೈಯಾನ್(ಶ್ರೀವೆಂಕಟೇಶ) ಆಗಿರಲೂ ಸಿದ್ಧರಾಗಿದ್ದಾರೆ. ಅವರು ಭಟ್ಟರ ಉಲ್ಲೇಖವನ್ನು ಹೀಗೆ ಗುರುತಿಸುತ್ತಾರೆ “ನಾನಲ್ಲಿರುವುದು ನನಗೂ ತಿಳಿಯಬೇಕಿಲ್ಲ, ನಾನಲ್ಲಿರುವುದು ಶ್ರೀವೆಂಕಟೇಶನಿಗೂ ತಿಳಿಯಬೇಕಿಲ್ಲ ಮತ್ತು ನಾನಲ್ಲಿರುವುದನ್ನು ಯಾರೂ ವೈಭವೀಕರಿಸಬೇಕಿಲ್ಲ. ನಾನು ಯಾವುದೋ ಒಂದು ರೂಪದಲ್ಲಿ ನಿರಂತರವಾಗಿ ಅಲ್ಲಿರುವುದೇ ನನಗೆ ಸಂತೋಷವನ್ನು ನೀಡುತ್ತದೆ”.
ಕುಲಶೇಖರ ಆಳ್ವಾರರ ಹಿರಿಮೆ ಇಂಥದಾಗಿತ್ತು, ಅವರು ಯಾವುದೇ ವೈಯಕ್ತಿಕ ಅಪೇಕ್ಷೆಯಿಲ್ಲದೆ ಭಗವತ್/ಭಾಗವತ ಸಂಬಂಧಕ್ಕಾಗಿ ಗಾಢವಾಗಿ ಹಂಬಲಿಸುತ್ತಿದ್ದರು.
ಇದನ್ನು ಮನಸ್ಸಿನಲ್ಲಿಟ್ಟು ನಾವು ಈಗ ಅವರ ಚರಿತ್ರೆಯನ್ನು ನೋಡೋಣ.
ಶ್ರೀ ಕುಲಶೇಖರ ಪೆರುಮಾಳ್ ಗರುಡ ವಾಹನ ಪಂಡಿತರ “ದಿವ್ಯ ಸೂರಿ ಚರಿತಮ್” ನಲ್ಲಿ ತೋರಿಸಿದಂತೆ ಕೊಲ್ಲಿನಗರ್(ತಿರುವನ್ಜಿಕ್ಕಾಳಮ್) ರಾಜ್ಯದಲ್ಲಿ ಕ್ಷತ್ರಿಯ ವಂಶದಲ್ಲಿ ಶ್ರೀಕೌಸ್ತುಭದ ಒಂದು ಅಂಶವಾಗಿ ಜನಿಸಿದರು (ಆಳ್ವಾರುಗಳು ಎಂಬೆರುಮಾನನಿಂದ ಸಂಸಾರದಿಂದ ಆರಿಸಲ್ಪಟ್ಟು ದಿವ್ಯವಾಗಿ ಆಶೀರ್ವದಿಸಲ್ಲ್ಪಟ್ಟವರೂ ಕೂಡ). ಅವರಿಗೆ ಕೊಲ್ಲಿ ಕಾವಲನ್, ಕೊಳಿಯರ್ ಕೋನ್, ಕೂಡಲ್ ನಾಯಕನ್, ಇತ್ಯಾದಿ ಹೆಸರುಗಳೂ ಇವೆ.
ಅವರ ತನಿಯನ್ ನಲ್ಲಿ ವಿವರಿಸಿರುವ ಹಾಗೆ “ಮಾಟ್ರಲರೈ, ವೀರಙ್ಕೆಡುತ್ತ ಚೆಙ್ಕೋಲ್ ಕೊಲ್ಲಿ ಕಾವಲನ್ ವಿಲ್ಲವರ್ಕೋನ್, ಚೇರನ್ ಕುಲಚೇಕರನ್ ಮುಡಿವೇಣ್ತರ್ ಶಿಕಾಮಣಿ” ಅರ್ಥಾತ್ “ಅವರು ತಮ್ಮ ವೈರಿಗಳ ನಾಶಕರು, ಚೇರ ರಾಜ್ಯದ ರಾಜರು, ಅವರಿಗೆ ರಥಗಳ, ಕುದುರೆಗಳ, ಆನೆಗಳ ಮತ್ತು ಸೈನಿಕರ ಮಹಾ ಬಲವಿತ್ತು, ಮತ್ತು ತಮ್ಮ ವೈರಿಗಳನ್ನು ಹೊಡೆದೋಡಿಸಬಲ್ಲವರಾಗಿದ್ದರು”. ಅವರು ಶಾಸ್ತ್ರದ ಪ್ರಕಾರ ರಾಜ್ಯಭಾರ ಮಾಡಿದರು ಮತ್ತು ಬಲಿಷ್ಠರು ಬಲಹೀನರನ್ನು ತೊಂದರೆಪಡಿಸದಂತೆ ನೋಡಿಕೊಂಡಿದ್ದರು ಮತ್ತು ಶ್ರೀರಾಮನ ಹಾಗೆ ತಮ್ಮ ಆಳ್ವಿಕೆಯಲ್ಲಿ ಉದಾರವಾಗಿ ಮತ್ತು ವಿನಮ್ರರಾಗಿದ್ದರು.
ಒಬ್ಬ ಶ್ರೇಷ್ಠ ರಾಜನಾಗಿದ್ದರಿಂದ, ಪೂರ್ಣ ಸ್ವತಂತ್ರವಾಗಿದ್ದು ಮತ್ತು ತಮ್ಮ ರಾಜ್ಯದ ನಿಯಂತ್ರಕರಾಗಿರಬೇಕೆಂದು ಅವರು ಯೋಚಿಸಿದ್ದರು. ಸಂಸಾರ ಮತ್ತು ಪರಮಪದ ಇವೆರಡರ ಸರ್ವೋಚ್ಛ ನಿಯಂತ್ರಕನಾದ ಶ್ರೀಮನ್ ನಾರಾಯಣನು, ತನ್ನ ನಿಷ್ಕಾರಣ ಕರುಣೆಯಿಂದಾಗಿ, ಅವರಿಗೆ ನಿಷ್ಕಳಂಕವಾದ ದಿವ್ಯ ಜ್ಞಾನವನ್ನಿತ್ತು ಆಶೀರ್ವದಿಸಿದನು, ಅವರ ರಜೋ/ತಮೋ ಗುಣಗಳನ್ನು ತೊಡೆದುಹಾಕಿದನು ಮತ್ತು ಅವರನ್ನು ಸತ್ವ ಗುಣದಲ್ಲಿ ಪೂರ್ಣವಾಗಿ ನೆಲೆಸುವಂತೆ ಮಾಡಿದನು ಮತ್ತು ತನ್ನ ದಿವ್ಯ ಸ್ವರೂಪ(ನಿಜ ಸ್ವಭಾವ), ರೂಪ, ಗುಣ, ವಿಭೂತಿ(ತನ್ನ ಸಂಪತ್ತು/ನಿಯಂತ್ರಕ ಶಕ್ತಿ) ಮತ್ತು ಚೇಷ್ಠಿತ(ಲೀಲೆ) ಗಳನ್ನು ತೋರಿಸಿದನು. ಆದನ್ನು ಕಂಡು ಮತ್ತು ಅರ್ಥ ಮಾಡಿಕೊಂಡು, ಆಳ್ವಾರರು, ಪೂರ್ಣವಾಗಿ ತಮ್ಮನ್ನು ದೈಹಿಕ ಆಕಾಂಕ್ಷೆಗಳಲ್ಲಿ ತೊಡಗಿಸಿಕೊಂಡು ಭಗವದ್ವಿಷಯಗಳಲ್ಲಿ ಯಾವುದೇ ಆಸಕ್ತಿಯನ್ನು ತೋರಿಸದ, ಸಂಸಾರಿಗಳ ನಡುವೆ ಇರಲು ಅತೀವ ಸಂಕಟಪಟ್ಟರು. ನಮ್ಮಾಳ್ವಾರರು ಸಾರಿದಂತೆ ಅತಿಯಾದ ವಿಷಯ ಸಂಪತ್ತು ಇನ್ನೂ ಹೆಚ್ಚು ಹೆಚ್ಚು ವಿಷಯಾಸಕ್ತಿಯಲ್ಲಿ ತೊಡಗಿಸಿ ಮಹಾ ಅಗ್ನಿಯ ಹಾಗೆ ತನ್ನ ಒಡೆಯನನ್ನೇ ನಾಶಮಾಡುತ್ತದೆ, ಕುಲಶೇಖರ ಆಳ್ವಾರರಿಗೆ ತಮ್ಮ ರಾಜ್ಯದ ಮೇಲೆ ಮೋಹವಿರಲಿಲ್ಲ ಮತ್ತು ವಿಭೀಷಣನು ತನ್ನ ಎಲ್ಲ ಸಂಪತ್ತನ್ನೂ ತೊರೆದು ಶ್ರೀರಾಮನಿಗೆ ಶರಣಾಗತನಾದಂತೆ, ಎಲ್ಲದರಿಂದಲೂ ದೂರವಾಗಿದ್ದರು.
ಅವರು ಶ್ರೀರಂಗಂ ಮತ್ತು ಶ್ರೀರಂಗನಾಥನ ಪರ ಅತೀವ ಒಲುಮೆಯನ್ನು ಬೆಳೆಸಿಕೊಂಡಿದ್ದರು, ಮತ್ತು ಲೌಕಿಕ ವಿಷಯಗಳಿಂದ ಸಂಪುರ್ಣವಾಗಿ ದೂರವಾಗಿದ್ದು ಮತ್ತು ತಮ್ಮ ಕಾಲವನ್ನು ಶ್ರೀರಂಗನಾಥನ ವೈಭವಗಳನ್ನು ಸ್ತುತಿಸುವುದರಲ್ಲೇ ಕಳೆಯುತ್ತಿದ್ದ ಶ್ರೀ ರಂಗನಾಥನ ಭಕ್ತರಲ್ಲಿ ಇನ್ನೂ ಹೆಚ್ಚು ಒಲುಮೆಯನ್ನು ಬೆಳೆಸಿಕೊಂಡಿದ್ದರು. ಅವರು ಸಾಧುಗಳೆಂದು(ವೈಷ್ಣವ ಅಗ್ರೇಸ) ಹೆಸರಾದ ಮತ್ತು “ಅಣ್ಣಿಯರಙ್ಗನ್ ತಿರುಮುಟ್ರತ್ತು ಅಡಿಯಾರ್” ಗಳೆಂದು ಗುರುತಿಸಲ್ಪಡುವ – ಅರ್ಥಾತ್ ತಮ್ಮ ಸಂಪೂರ್ಣ ಜೀವನವನ್ನು ಶ್ರೀರಂಗನಾಥನ ದೇವಸ್ಥಾನದಲ್ಲೆ ಕಳೆಯುವ ಭಕ್ತರು – ಶ್ರೀವೈಷ್ಣವರ ನಡುವೆ ಜೀವಿಸಬೇಕೆಂದು ಬಯಸಿದ್ದರು. ಶ್ರೀರಂಗ ಯಾತ್ರೆ ಮತ್ತು ಶ್ರೀರಂಗಕ್ಕೆ ಹೋಗುವ ಬಯಕೆಯೇ ಪರಮಪದವನ್ನು ನೀಡುವುದೆಂದು ತಿಳಿದಿರುವಾಗ, ಶ್ರೀರಂಗಂನಲ್ಲಿ ಜೀವಿಸುದರ ಬಗ್ಗೆ ಹೇಳುವುದೇನಿದೆ; ಅವರು ಪ್ರತಿದಿನ ಶ್ರೀರಂಗಕ್ಕೆ ಹೋಗುವುದರ ಬಗ್ಗೆ ಯೋಚಿಸುತ್ತಿದ್ದರು.
ಅದಲ್ಲದೆ, ಪವಿತ್ರ ನದಿಗಳದ ಗಂಗಾ, ಯಮುನಾ, ಇತ್ಯಾದಿಗಳಿಗಿಂತ ಶ್ರೇಷ್ಠವೆಂದು ಶ್ಲಾಘಿಸಲ್ಪಟ್ಟ ಸ್ವಾಮಿ ಪುಷ್ಕರಿಣಿಯಿರುವ ತಿರುವೇಂಕಟಮ್(ತಿರುಮಲೆ) ಬಗ್ಗೆ ಅವರು ಅತಿಯಾದ ಮಮತೆಯನ್ನು ಬೆಳೆಸಿಕೊಂಡಿದ್ದರು. ಆಂಡಾಳ್ ಹೇಳಿದಂತೆ “ವೇಙ್ಕಟತ್ತೈಪ್ಪತಿಯಾಗ ವಾಳ್ವೀರ್ಗಾಳ್”, ಅರ್ಥಾತ್ ಎಲ್ಲಿ ಶ್ರೇಷ್ಠ ಮಹರ್ಷಿಗಳು ಮತ್ತು ಮಹಾತ್ಮರು ಶಾಶ್ವತವಾಗಿ ನೆಲೆಸಿದ್ದಾರೋ ಆ ತಿರುವೇಂಕಟವನ್ನು ನಾವು ನಮ್ಮ ಶಾಶ್ವತ ನೆಲೆಯನ್ನಾಗಿ ಮಾಡಿಕೊಳ್ಳಬೇಕು. ನಾವು ಈಗಾಗಲೇ ಆರಂಭದಲ್ಲಿ ನೋಡಿದಂತೆ ಅವರು ಈ ದಿವ್ಯದೇಶದಲ್ಲಿ ಒಂದು ಪಕ್ಷಿಯಾಗಿ, ಒಂದು ಮರವಾಗಿ, ಅಥವಾ ಒಂದು ಕಲ್ಲಾಗಿಯಾದರೂ ಇರಲು ಬಯಸಿದರು. ಇದಕ್ಕೂ ಮೀರಿ ಅವರು ಅನೇಕ ದಿವ್ಯದೇಶಗಳಲ್ಲಿ ಅರ್ಚಾವತಾರ ಎಮ್ಪೆರುಮಾನ್ ಮತ್ತು ಆತನ ಭಕ್ತರ ಸೇವೆ ಮಾಡುತ್ತಾ ಜೀವಿಸಲು ಬಯಸಿದ್ದರು.
ಅನೇಕ ಪುರಾಣಗಳು, ಇತಿಹಾಸಗಳು, ಇತ್ಯಾದಿಗಳನ್ನು ವಿಶ್ಲೇಷಿಸಿ ಮತ್ತು ಪರೀಕ್ಷಿಸಿದ ನಂತರ ಅವರು “ಮುಕುಂದ ಮಾಲಾ” ಎಂಬ ಸಂಸ್ಕೃತ ಶ್ಲೋಕ ಗ್ರಂಥವನ್ನು ದಯಪಾಲಿಸಿದರು. ಶ್ರೀರಾಮಾಯಣದ ಹಿರಿಮೆಯು ಈ ಕೆಳಗಿನ ಶ್ಲೋಕದಲ್ಲಿ ವಿವರಿಸಲ್ಪಟ್ಟಿದೆ:
ವೇದ ವೇದ್ಯೇ ಪರೇ ಪುಂಸಿ ಜಾತೇ ದಶರಥಾತ್ಮಜೇ
ವೇದ: ಪ್ರಾಚೇತಸಾದಾಸೀತ್ ಸಾಕ್ಷಾತ್ ರಾಮಾಯಣತ್ಮನಾ
ವೇದದಿಂದ ಅರಿಯಲ್ಪಡಬಹುದಾದ ಶ್ರೀಮನ್ ನಾರಾಯಣನು ಹೇಗೆ ಶ್ರೀರಾಮ (ದಶರಥಾತ್ಮಜ)ನಾಗಿ ಅವತರಿಸಿದನೋ ಹಾಗೆ ವೇದವೇ ಶ್ರೀ ವಾಲ್ಮೀಕಿಯಿಂದ ಶ್ರೀ ರಾಮಾಯಣವಾಗಿ ಅವತರಿಸಿತು.
ಆಳ್ವಾರರು ಶ್ರೀರಾಮಾಯಣವನ್ನು ಕೇಳುವುದು ಮತ್ತು ಅದರ ಪ್ರವಚನ ಮಾಡುವುದನ್ನು ತಮ್ಮ ದಿನಚರಿಯನ್ನಾಗಿ ಮಾಡಿಕೊಂಡರು. ಕೆಲವೊಮ್ಮೆ ಶ್ರೀರಾಮಾಯಣದಲ್ಲಿ ಎಷ್ಟು ತಲ್ಲೀನರಾಗಿರುತ್ತಿದ್ದರೆಂದರೆ ತಮ್ಮನ್ನು ತಾವೇ ಮರೆತುಬಿಡುತ್ತಿದ್ದರು. ಒಮ್ಮೆ ಪ್ರವಚನಕಾರರು ಶ್ರೀರಾಮಾಯಣದ ಒಂದು ಪ್ರಸಂಗವನ್ನು ವಿವರಿಸುತ್ತಾರೆ, ಅದರಲ್ಲಿ ಖರ/ದೂಷಣರ ಕೆಳಗೆ 14000 ರಾಕ್ಷಸರು ಶ್ರೀರಾಮನ ಜೊತೆ ಯುದ್ಧಕ್ಕೆ ಸಿದ್ಧತೆ ನಡೆಸಿದ್ದಾರೆ ಮತ್ತು ಶ್ರೀರಾಮನು ಸೀತಾದೇವಿಯನ್ನು ಇಳಯ ಪೆರುಮಾಳ್(ಲಕ್ಷ್ಮಣನ) ರಕ್ಷಣೆಯಲ್ಲಿ ಒಂದು ಗುಹೆಯಲ್ಲಿ ಬಿಟ್ಟಿದ್ದಾನೆ ಮತ್ತು ಎಲ್ಲಾ ಋಷಿಗಳು ಶ್ರೀರಾಮನು 14000 ರಾಕ್ಷಸರ ಮೇಲೆ ಏಕಾಂಗಿಯಾಗಿ ಹೋರಾಡಬೇಕಾದ ಪರಿಸ್ಥಿತಿಯನ್ನು ಕಂಡು ಭಯಭೀತರಾಗಿದ್ದಾರೆ. ಆಳ್ವಾರರು ಇದರಿಂದ ಭಾವಪರವಶರಾಗಿ ತಕ್ಷಣವೇ ತಮ್ಮ ಸೇನೆಗೆ ಶ್ರೀರಾಮನಿಗೆ ಸಹಾಯಕ್ಕಾಗಿ ಯುದ್ಧಕ್ಕೆ ಸಿದ್ಧರಾಗಲು ಮತ್ತು ಯುದ್ಧಭೂಮಿಯ ಕಡೆಗೆ ಹೊರಡಲು ಆಜ್ಞಾಪಿಸುತ್ತಾರೆ. ಇದನ್ನು ನೋಡಿ, ಅವರ ಮಂತ್ರಿಗಳಲ್ಲಿ ಕೆಲವರು, ಕೆಲವು ಜನರಿಗೆ ಎದುರು ದಿಕ್ಕಿನಿಂದ ಬಂದು “ಶ್ರೀರಾಮನು ಯುದ್ಧವನ್ನು ಈಗಾಗಲೇ ಜಯಿಸಿಯಾಗಿದೆ ಮತ್ತು ಸೀತಾದೇವಿಯು ಶ್ರೀರಾಮನ ಗಾಯಗಳಿಗೆ ಮೃದುವಾಗಿ ಶುಶ್ರೂಷೆ ಮಾಡುತ್ತಿದ್ದಾರೆ ಮತ್ತು ಇನ್ನು ಅಲ್ಲಿಗೆ ಹೋಗಬೇಕಾಗಿಲ್ಲ” ಎಂಬ ಮಾಹಿತಿಯನ್ನು ಅವರಿಗೆ ಕೊಡಲು ವ್ಯವಸ್ಥೆ ಮಾಡುತ್ತಾರೆ. ಆಳ್ವಾರರು ತೃಪ್ತಿಗೊಂಡು ತಮ್ಮ ರಾಜ್ಯಕ್ಕೆ ಹಿಂತಿರುಗುತ್ತಾರೆ.
ಅವರ ಮಂತ್ರಿಗಳು ಆಳ್ವಾರರ ನಡವಳಿಕೆಯ ಬಗ್ಗೆ ಚಿಂತಿಸಲು ಆರಂಭಿಸುತ್ತಾರೆ ಮತ್ತು ಇದು ಅವರ ಶ್ರೀವೈಷ್ಣವರೊಂದಿಗಿನ ಸಹವಾಸದ ಪರಿಣಾಮ ಎಂದು ನಿರ್ಣಯಿಸುತ್ತಾರೆ. ಅವರು ಆ ಶ್ರೀವೈಷ್ಣವರನ್ನು ಓಡಿಸಲು ನಿರ್ಧರಿಸುತ್ತಾರೆ ಮತ್ತು ಅದಕ್ಕಾಗಿ ಒಂದು ಯೋಜನೆಯನ್ನು ರೂಪಿಸುತ್ತಾರೆ. ಅವರು ಆಳ್ವಾರರ ತಿರುವಾರಾಧನ ಕೊಠಡಿಯಿಂದ ಒಂದು ವಜ್ರದ ಹಾರವನ್ನು ಅಪಹರಿಸುತ್ತಾರೆ ಮತ್ತು ಆಳ್ವಾರರ ಆಪ್ತಮಿತ್ರ ಶ್ರೀವೈಷ್ಣವರು ಅದನ್ನು ಅಪಹರಿಸಿರಬೇಕೆಂದು ಸಾರುತ್ತಾರೆ. ತಕ್ಷಣವೇ ಆಳ್ವಾರರು ಒಂದು ವಿಷಸರ್ಪದಿಂದ ಕೂಡಿದ ಮಡಕೆಯನ್ನು ತರಲು ಆಜ್ಞಾಪಿಸುತ್ತಾರೆ ಮತ್ತು ಅದು ಬಂದ ಒಡನೆಯೇ ತಮ್ಮ ಕೈಯನ್ನು ಅದರೊಳಗೆ ಹಾಕುತ್ತಾರೆ ಮತ್ತು “ಶ್ರೀವೈಷ್ಣವರು ಇಂಥ ಕೃತ್ಯಗಳಲ್ಲಿ ತೊಡಗುವುದಿಲ್ಲ” ಎಂದು ಘೋಷಿಸುತ್ತಾರೆ – ಆ ಹಾವು ಅವರ ಪ್ರಾಮಾಣಿಕತೆಯಿಂದಾಗಿ ಅವರನ್ನು ಕಚ್ಚುವುದಿಲ್ಲ ಮತ್ತು ಮಂತ್ರಿಗಳು ನಾಚಿಕೆಯಿಂದ ತಲೆತಗ್ಗಿಸುತ್ತಾರೆ, ಹಾರವನ್ನು ಹಿಂತಿರುಗಿಸುತ್ತಾರೆ, ಮತ್ತು ಆಳ್ವಾರರ ಮತ್ತು ಶ್ರೀವೈಷ್ಣವರ ಕ್ಷಮಾಪಣೆಯನ್ನು ಕೇಳುತ್ತಾರೆ.
ತರುವಾಯ, ಆಳ್ವಾರರು ಸಂಸಾರಿಗಳ ನಡುವೆ ಜೀವಿಸಲು ಅತಿ ಯಾತನೆ ಅನುಭವಿಸುತ್ತಾರೆ, ಶೌನಕ ಸಂಹಿತೆಯಲ್ಲಿ ಹೇಳಿರುವಂತೆ “ಒಬ್ಬ ಪ್ರಪನ್ನನಿಗೆ ಭಗವಾನನನ್ನು ಸ್ತುತಿಸದ ಜನರೊಂದಿಗೆ ಇರುವುದು, ಒಂದು ಬೆಂಕಿಯ ಚೆಂಡಿನಲ್ಲಿರುವುದಕ್ಕಿಂತ ಕಷ್ಟಕರವಾದದ್ದು”. ನಂತರ ಅವರು ತಮ್ಮ ಮಗನಿಗೆ ರಾಜ್ಯದ ಪಟ್ಟಾಭಿಷೇಕ ಮಾಡಿ, ಎಲ್ಲ ಜವಾಬ್ದಾರಿಗಳನ್ನು ಕೈಗೊಪ್ಪಿಸುತ್ತಾರೆ ಮತ್ತು ಹೀಗೆ ಸಾರುತ್ತಾರೆ “ಆನಾಥ ಚೆಲ್ವತ್ತು ಅರಮ್ಬೈಯರ್ಗಳ್ ತರ್ಚೂಳ ವಾನಾಳುಮ್ ಚೆಲ್ವಮುಮ್ ಮಣ್ಣರಚುಮ್ ಯಾನ್ ವೇಣ್ಡೇನ್”, ಅರ್ಥಾತ್ ಇನ್ನು ಮುಂದೆ ಅವರಿಗೆ ಅನೇಕ ಸೇವಕರು ಮತ್ತು ಮನೋರಂಜಕರಿಂದ ಆವರಿಸಲ್ಪಟ್ಟ ಅಪಾರ ಸಂಪತ್ತಿನ ಮೇಲೆ ಅಧಿಕಾರದ ಆಸೆಯಿಲ್ಲ. ನಂತರ ಅವರು ತಮ್ಮ ಆಪ್ತ ಶ್ರೀವೈಷ್ಣವ ಮಿತ್ರರೊಡನೆ ಶ್ರೀರಂಗಕ್ಕೆ ಹೊರಡುತ್ತಾರೆ, ಮತ್ತು ಚಿನ್ನದ ತಟ್ಟೆಯ ಮೇಲೆ ಇರಿಸಿರುವ ಒಂದು ವಜ್ರಡಂತೆ ಕಾಣುವ (ಆದಿಶೇಷನ ಮೇಲೆ ಪವಡಿಸಿರುವ) ಮತ್ತು ಎಲ್ಲರ ಯೋಗಕ್ಷೇಮವನ್ನು ಯಾವಾಗಲೂ ಎದುರು ನೋಡುತ್ತಿರುವ ಶ್ರೀರಂಗನಾಥನಿಗೆ ಮಂಗಳಾಶಾಸನವನ್ನು ಮಾಡುತ್ತಾರೆ. ಪ್ರತಿ ಕ್ಷಣವೂ ಅವರು ಎಂಬೆರುಮಾನನ್ನು ಸ್ತುತಿಸುತ್ತಾರೆ ಮತ್ತು ತಮ್ಮ ಹೊರಹೊಮ್ಮುವ ಭಾವನೆಗಳ ಪರಿಣಾಮವಾಗಿ ಪೆರುಮಾಳ್ ತಿರುಮೊಳಿಯನ್ನು ರಚಿಸುತ್ತಾರೆ ಮತ್ತು ಅದನ್ನು ಪ್ರತಿಯೊಬ್ಬರಿಗೂ ಅನುಗ್ರಹಿಸುತ್ತಾರೆ ಮತ್ತು ಅವರನ್ನು ಉದ್ಧರಿಸುತ್ತಾರೆ. ಸ್ವಲ್ಪ ಸಮಯದ ನಂತರ ಅವರು ಈ ಸಂಸಾರವನ್ನು ತ್ಯಜಿಸುತ್ತಾರೆ ಮತ್ತು ಪರಮಪದನಾಥನ ದಿವ್ಯ ನೆಲೆಗೆ ತಲುಪುತ್ತಾರೆ ಮತ್ತು ಅಲ್ಲಿ ಆತನಿಗೆ ನಿರಂತರ ಸೇವೆ ಸಲ್ಲಿಸುತ್ತಾರೆ.
ಅವರ ತನಿಯನ್:
ಗುಶ್ಯತೇ ಯಸ್ಯ ನಗರೇ ರಂಗಯಾತ್ರಾ ದಿನೇ ದಿನೇ
ತಮಹಮ್ ಶಿರಸಾ ವಂದೇ ರಾಜಾನಮ್ ಕುಲಶೇಖರಮ್
ಅವರ ಅರ್ಚಾವತಾರ ಅನುಭವವನ್ನು ಇಲ್ಲಿ ಈಗಾಗಲೇ ಚರ್ಚಿಸಲಾಗಿದೆ: http://ponnadi.blogspot.in/2012/10/archavathara-anubhavam-kulasekara.html
ಅಡಿಯೇನ್ ಪಾರ್ಥಸಾರಥಿ ರಾಮಾನುಜ ದಾಸನ್
ಮೂಲ: http://guruparamparai.koyil.org/2013/01/18/kulasekara-azhwar/
ರಕ್ಷಿತ ಮಾಹಿತಿ: https://guruparamparai.koyil.org
ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org